ಮಂಗಳೂರು, ಸೆ 29: ಮಂಗಳೂರು ನಗರದ ಬಾವುಟಗುಡ್ಡೆಯ ಕೋರ್ಟ್ ಕ್ರಾಸ್ ರೋಡ್‌ನಲ್ಲಿ ಮಂಗಳವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಧೀಶರು ಪ್ರಯಾಣಿಸುತ್ತಿದ್ದ ಕಾರು, ಗೂಡ್ಸ್ ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.
ಈ ಭೀಕರ ಅಪಘಾತದಲ್ಲಿ ಗೂಡ್ಸ್ ಆಟೋ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಸರಗೋಡು ಮೊಗ್ರಾಲ್‌ನ ಪೊಟ್ಟೊರಿ ಪೇರಲ್‌ನ ನಿವಾಸಿ 67 ವರ್ಷದ ಚಂದ್ರ ಕೆ. ಮೃತ ದುರ್ದೈವಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತದ ಸಂದರ್ಭದಲ್ಲಿ ಕಾರು ಚಲಾಯಿಸುತ್ತಿದ್ದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿನಯ್ ಡಿ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ
ನ್ಯಾಯಾಧೀಶರಾದ ವಿನಯ್ ಡಿ. ಅವರು ತಮ್ಮ ಸರ್ಕಾರಿ ಕಾರಿನಲ್ಲಿ ಬೆಳಗ್ಗೆ ಮನೆಯಿಂದ ಹೊರಟು, ಬಾವುಟಗುಡ್ಡೆಯಲ್ಲಿರುವ ಜಿಲ್ಲಾ ನ್ಯಾಯಾಲಯದ ಸಂಕೀರ್ಣಕ್ಕೆ ತೆರಳಲು ಕರಂಗಲ್ಪಾಡಿಯ ರಾಧಾ ಮೆಡಿಕಲ್ಸ್ ಎದುರಿನ ತಿರುವಿಗೆ ತಲುಪುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ ರಿಕ್ಷಾ ನೇರವಾಗಿ ನ್ಯಾಯಾಧೀಶರ ಕಾರಿಗೆ ಢಿಕ್ಕಿ ಹೊಡೆದಿದೆ. ಬಳಿಕ ಅದೇ ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೂ ಢಿಕ್ಕಿ ಹೊಡೆದು ಆಟೋ ಮಗುಚಿ ಬಿದ್ದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಗೂಡ್ಸ್ ಆಟೋ ಚಾಲಕ ಚಂದ್ರ ಕೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಗೂಡ್ಸ್ ಆಟೋ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಪ್ಲೆವಿಯನ್ ಮೆರ್ವಿನ್ ಅವರಿಗೂ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಕಾರು, ಗೂಡ್ಸ್ ಆಟೋ ಹಾಗೂ ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಘಟನೆಗೆ ಸಂಬಂಧಿಸಿದಂತೆ ನ್ಯಾಯಾಧೀಶರು ನೀಡಿದ ದೂರಿನ ಮೇರೆಗೆ ಕದ್ರಿ ಟ್ರಾಫಿಕ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.