ಮಂಗಳೂರು, ಸೆಪ್ಟೆಂಬರ್ 02 : ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಚಿವರು ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದು, ಅಧಿಕಾರಿಗಳಿಗೆ ತಿಂಗಳ ಗುರಿಯನ್ನು ನೀಡಲಾಗಿದೆ ಎಂದು ಮಂಗಳೂರು ನಗರ ಉತ್ತರ ಶಾಸಕ ವೈ. ಭರತ್ ಶೆಟ್ಟಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, “ಪೇಮೆಂಟ್ ಕೋಟಾ” ಮೂಲಕ ಅಧಿಕಾರಕ್ಕೆ ಬಂದಿರುವ ಕೆಲವು ಸಚಿವರು ಸುಲಿಗೆಯಲ್ಲಿ ನಿರತರಾಗಿದ್ದು, ಅಧಿಕಾರಿಗಳಿಂದ ಹಣ ವಸೂಲಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಸಂಗ್ರಹಿಸಿ ಸಂಬಂಧಪಟ್ಟ ಸಚಿವರಿಗೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ದೂರಿದರು.
“ಕಾಂಗ್ರೆಸ್ ಶಾಸಕರೇ ಈ ಬಗ್ಗೆ ಲಿಖಿತ ರೂಪದಲ್ಲಿ ದೂರು ನೀಡುತ್ತಿದ್ದಾರೆ,” ಎಂದು ಉಲ್ಲೇಖಿಸಿದ ಭರತ್ ಶೆಟ್ಟಿ, ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆನ್ನಲಾದ ಪತ್ರವನ್ನೇ ಇದಕ್ಕೆ ನಿದರ್ಶನವಾಗಿ ಹೇಳಿದರು.
ಅಶೋಕ್ ರೈ ಅವರ ಪತ್ರವೇ ಈ ಸರ್ಕಾರದ ಆಡಳಿತ ವೈಖರಿಯನ್ನು ಕನ್ನಡಿ ಹಿಡಿದು ತೋರಿಸುತ್ತದೆ ಎಂದ ಅವರು, ಪ್ರಸ್ತುತ ಆಡಳಿತದಲ್ಲಿ ಭ್ರಷ್ಟಾಚಾರವೊಂದೇ ಏಕೈಕ “ಗ್ಯಾರೆಂಟಿ”ಯಾಗಿದೆ ಎಂದು ವ್ಯಂಗ್ಯವಾಡಿದರು.
“ಇದು ಕೇವಲ ಲಂಚಕ್ಕಷ್ಟೇ ಗ್ಯಾರೆಂಟಿ ಇರುವ ಸರ್ಕಾರ,” ಎಂದು ಅವರು ಆರೋಪಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. 40ರಷ್ಟು ಕಮಿಷನ್ ಆರೋಪ ಮಾಡಿ ಕಾಂಗ್ರೆಸ್ ನಡೆಸಿದ ಅಭಿಯಾನವನ್ನು ಶಾಸಕರು ಈ ವೇಳೆ ಸ್ಮರಿಸಿದರು. ಅಂದು ಯಾವುದೇ ಸಾಕ್ಷ್ಯಾಧಾರವಿಲ್ಲದೆ ಮಾಡಲಾದ ಆ ಆರೋಪಗಳು ಕೇವಲ “ಹಿಟ್ ಆಂಡ್ ರನ್” ಮಾದರಿಯಾಗಿದ್ದವು ಎಂದರು.
ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದಲ್ಲಿದ್ದಾಗ ಹಿಂದಿನ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿತ್ತು, ಆದರೆ ಇಂದು ಅದೇ ಪಕ್ಷದ ಆಡಳಿತದಲ್ಲಿ ಅದಕ್ಕಿಂತ ಹೆಚ್ಚಿನ ಮಟ್ಟದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ದೂರಿದರು.