ಮಂಗಳೂರು, ಸೆ. 19 : ಮಂಗಳೂರಿನಲ್ಲಿ ಎರಡು ಪ್ರತ್ಯೇಕ ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ. ನಕಲಿ ಎಪಿಕೆ ಫೈಲ್ ಮೂಲಕ ವೃದ್ಧೆಗೆ 1.40 ಲಕ್ಷ ರೂ. ಮತ್ತು ಸೋಲಾರ್ ಉಪಕರಣದ ನೆಪದಲ್ಲಿ ಉದ್ಯಮಿಗೆ 6.15 ಲಕ್ಷ ರೂ. ಸೈಬರ್ ವಂಚನೆಯಾಗಿದೆ.
ವಾಟ್ಸಾಪ್ ಮೂಲಕ ‘ಪಿಎಂ ಕಿಸಾನ್’ ಹೆಸರಿನ ನಕಲಿ ಎಪಿಕೆ (APK) ಫೈಲ್ ಕಳುಹಿಸಿ, 65 ವರ್ಷದ ವೃದ್ಧೆಯೊಬ್ಬರ ಕೆನರಾ ಬ್ಯಾಂಕ್ ಖಾತೆಯಿಂದ ಆನ್ಲೈನ್ ಮೂಲಕ ರೂ. 1,40,392 ಹಣವನ್ನು ವಂಚಿಸಿರುವ ಘಟನೆ ಮಂಗಳೂರು ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಪ್ರಕಟಣೆ ತಿಳಿಸಿದೆ.
ನಗರದ ನಿವಾಸಿ ಹಾಗೂ ಕಳೆದ 15 ವರ್ಷಗಳಿಂದ ಬಿಎಸ್‌ಎನ್‌ಎಲ್ ಮೊಬೈಲ್ ಸಂಖ್ಯೆ ಬಳಸುತ್ತಿರುವ ವೃದ್ಧೆಯ ವಾಟ್ಸಾಪ್‌ಗೆ ಅಪರಿಚಿತರು ‘ಪಿಎಂ ಕಿಸಾನ್’ ಹೆಸರಿನ ಮಾಲ್ವೇರ್ ಅಥವಾ ನಕಲಿ ಎಪಿಕೆ ಫೈಲ್ ಕಳುಹಿಸಿದ್ದರು. ಸೆಪ್ಟಂಬರ್ 15ರಂದು ಸಂತ್ರಸ್ತೆಯ ಕೆನರಾ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ರೂ. 1,40,392 ಹಣವು ಆನ್ಲೈನ್ ಮೂಲಕ ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಹಣ ಕಡಿತಗೊಂಡ ಮೆಸೇಜ್ ಕಂಡು ಗಾಬರಿಗೊಂಡ ವೃದ್ಧೆ, ವೆಲೆನ್ಶಿಯಾ ಶಾಖೆಗೆ ತೆರಳಿ ವಿಚಾರಿಸಿದಾಗ ವಂಚನೆ ನಡೆದಿರುವುದು ಖಚಿತಪಟ್ಟಿದೆ. ಕೊನೆಗೆ ಹಣ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಅವರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸೋಲಾರ್ ಉಪಕರಣಗಳನ್ನು ಪೂರೈಸುವ ನೆಪವೊಡ್ಡಿ ನಗರದ ಸೋಲಾರ್ ಇನ್‌ಸ್ಟಾಲೇಶನ್ ಉದ್ಯಮಿಯೊಬ್ಬರಿಂದ ಬರೋಬ್ಬರಿ ರೂ. 6,15,500 ಹಣವನ್ನು ವರ್ಗಾಯಿಸಿಕೊಂಡು ಆನ್ಲೈನ್ ವಂಚನೆ ಎಸಗಿರುವ ಮತ್ತೊಂದು ಘಟನೆ ಮಂಗಳೂರು ಸಿಇಎನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದಲ್ಲಿ ಸೋಲಾರ್ ಕಂಪನಿ ನಡೆಸುತ್ತಿರುವ 33 ವರ್ಷದ ಉದ್ಯಮಿ ನೀಡಿದ ದೂರಿನ ಮೇರೆಗೆ ಮುಂಬೈ ಮೂಲದ ಕಂಪನಿಯ ಮಾಜಿ ಸಲಹೆಗಾರ ಪವನ್ ಮಾಂಡ್ಲೇಕರ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ 6 ತಿಂಗಳಿಂದ ಮುಂಬೈನ ‘Mfines ಸೋಲಾರ್ ಕಂಪನಿ’ಯಿಂದ ಆನ್ಲೈನ್ ಮೂಲಕ ವಸ್ತುಗಳನ್ನು ಬುಕ್ ಮಾಡುತ್ತಿದ್ದ ಉದ್ಯಮಿಗೆ, ಇತ್ತೀಚೆಗೆ ಸಂಪರ್ಕಕ್ಕೆ ಬಂದ ಪವನ್ ಮಾಂಡ್ಲೇಕರ್ ಕಂಪನಿಯ ಅಧಿಕೃತ ಬ್ಯಾಂಕ್ ಖಾತೆಯಲ್ಲಿ ತಾಂತ್ರಿಕ ಸಮಸ್ಯೆಯಿದೆ ಎಂದು ಸುಳ್ಳು ಹೇಳಿ ಬೇರೆ ಖಾತೆಗಳ ವಿವರ ನೀಡಿದ್ದ. ಆತನ ಮಾತನ್ನು ನಂಬಿದ ಉದ್ಯಮಿ ಆಗಸ್ಟ್ 25ರಿಂದ ಸೆಪ್ಟಂಬರ್ 7ರವರೆಗೆ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 6,15,500 ಹಣವನ್ನು ವರ್ಗಾಯಿಸಿದ್ದರು.
ಆದರೆ ವಸ್ತುಗಳು ಬಾರದೆ ಇದ್ದಾಗ ಕಂಪನಿಯ ಮುಖ್ಯಸ್ಥರನ್ನು ಸಂಪರ್ಕಿಸಿದಾಗ, ಪವನ್ ಮಾಂಡ್ಲೇಕರ್ ಈಗಾಗಲೇ ಕಂಪನಿ ಬಿಟ್ಟು ಹೋಗಿರುವುದು ಹಾಗೂ ಯಾವುದೇ ಬುಕ್ಕಿಂಗ್ ಆಗದೆ ಇರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.