BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru: Notorious interstate fraudster arrested ಮಂಗಳೂರು: ನಕಲಿ NCIB ಅಧಿಕಾರಿ ಎಂದು ವಂಚಿಸಿ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಅಂತಾರಾಜ್ಯ ವಂಚಕ ಸ್ಯಾಮ್ ಪೀಟರ್ ಬಂಧನ..!


ಮಂಗಳೂರು,ಸೆಪ್ಟೆಂಬರ್ 01: ನಕಲಿ NCIB (ರಾಷ್ಟ್ರೀಯ ಅಪರಾಧ ತನಿಖಾ ದಳ) ಅಧಿಕಾರಿ ಎಂದು ಪರಿಚಯಿಸಿಕೊಂಡು ವಂಚನೆ ಹಾಗೂ ಸುಲಿಗೆ ಎಸಗಿ, ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಅಂತರರಾಜ್ಯ ವಂಚಕನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಆಲಪ್ಪುಝ ಕೊಲ್ಲಂ ಮೂಲದವರಾಗಿದ್ದು, ಪ್ರಸ್ತುತ ಉತ್ತರ ಪ್ರದೇಶದ ಲಖನೌದಲ್ಲಿ ವಾಸವಿದ್ದ ಸ್ಯಾಮ್ ಪೀಟರ್ ಯಾನೆ ಡ್ಯಾನಿ ತಾರಕನ್ ಯಾನೆ ಆಂಟನಿ (64) ಬಂಧಿತ ಆರೋಪಿ.

ವಂಚನೆಯ ಜಾಲ:

ಆರೋಪಿ ಸ್ಯಾಮ್ ಪೀಟರ್ ತನ್ನದೇ ಗ್ಯಾಂಗ್‌ ರಚಿಸಿಕೊಂಡು, ತನಿಖಾ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸುತ್ತಿದ್ದ. ಹಣಕಾಸು ವಿವಾದ, ಬ್ಯಾಂಕ್ ಮತ್ತು ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕುವವರನ್ನು ಗುರಿಯಾಗಿಸಿಕೊಂಡು, ತಾನು ಉನ್ನತ ಅಧಿಕಾರಿಯೆಂದು ನಂಬಿಸಿ ಹಣ ಪಡೆದು ಸುಲಿಗೆ ನಡೆಸುತ್ತಿದ್ದ. ಈ ಕುರಿತು 2019ರ ಆಗಸ್ಟ್ 16ರಂದು ಮಂಗಳೂರು ಕದ್ರಿ ಪೊಲೀಸರು ಪಂಪ್‌ವೆಲ್‌ನ ಲಾಡ್ಜ್‌ ಒಂದರಲ್ಲಿ ಕಾರ್ಯಾಚರಣೆ ನಡೆಸಿ ಸ್ಯಾಮ್ ಪೀಟರ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದರು. ನಂತರ ಜಾಮೀನು ಪಡೆದು ಹೊರಬಂದಿದ್ದ ಆರೋಪಿ, ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದನು.

ಹಲವು ಹೆಸರುಗಳು ಮತ್ತು ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್:

ಪೊಲೀಸರ ತನಿಖೆಯಲ್ಲಿ ಆರೋಪಿಯು ತನ್ನ ಗುರುತನ್ನು ಮರೆಮಾಚಲು ಬರೋಬ್ಬರಿ 11ಕ್ಕೂ ಹೆಚ್ಚು ನಕಲಿ ಹೆಸರುಗಳನ್ನು (ಆಂಟನಿ, ರಾಹುಲ್ ಪೀಟರ್, ಸ್ಯಾಮ್ ಪೀಟರ್, ರಾಜೇಶ್ ರಾಬಿನ್ಸನ್, ಡ್ಯಾನಿ ತಾರಕನ್ ಇತ್ಯಾದಿ) ಬಳಸಿರುವುದು ಬೆಳಕಿಗೆ ಬಂದಿದೆ. ಅಪರಾಧ ಎಸಗಿ ಊರು ಬದಲಾಯಿಸುತ್ತಿದ್ದ ಈತನ ವಿರುದ್ಧ ‘ರಾಹುಲ್ ಪೀಟರ್’ ಹೆಸರಿನಲ್ಲಿ 2001ರಿಂದಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ವಿವಿಧ ರಾಜ್ಯಗಳಲ್ಲಿ 17 ಪ್ರಕರಣಗಳು:

ಮಂಗಳೂರು ನಗರದ ಪೂರ್ವ, ಉಳ್ಳಾಲ, ಕೊಣಾಜೆ ಠಾಣೆಗಳು ಸೇರಿದಂತೆ ಚಿಕ್ಕಬಳ್ಳಾಪುರ, ಬೆಂಗಳೂರು, ಉಡುಪಿ, ಕುಶಾಲನಗರ ಹಾಗೂ ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಒಟ್ಟು 17 ವಂಚನೆ ಪ್ರಕರಣಗಳು ಈತನ ಮೇಲಿವೆ. ಉಳ್ಳಾಲ ಠಾಣೆ ಪ್ರಕರಣದಲ್ಲಿ 17 ಬಾರಿ ಹಾಗೂ ಪೂರ್ವ ಠಾಣೆ ಪ್ರಕರಣದಲ್ಲಿ 14 ಬಾರಿ ವಾರೆಂಟ್ ಜಾರಿಯಾಗಿ, ಪ್ರೊಕ್ಲಮೇಷನ್ (ಉದ್ಘೋಷಣೆ) ಕೂಡ ಆಗಿತ್ತು.

ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಸೆರೆಯಾದ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!