ಮಂಗಳೂರು,ಸೆಪ್ಟೆಂಬರ್ 15:ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಮಂಗಳವಾರ (ಸೆ.15) ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪರಿಶೀಲನಾ ಸಭೆಯು ತೀವ್ರ ವಾಕ್ಸಮರ, ಗದ್ದಲ ಹಾಗೂ ರಾಜಕೀಯ ಜಟಾಪಟಿಗೆ ಸಾಕ್ಷಿಯಾಯಿತು.
ಆಡಳಿತಾರೂಢ ಕಾಂಗ್ರೆಸ್ ಶಾಸಕರೇ ಕೆಆರ್‌ಐಡಿಎಲ್ (KRIDL) ಸಂಸ್ಥೆಯಲ್ಲಿ ಬಿಲ್ ಪಾಸ್ ಮಾಡಲು ಶೇ.7ರಷ್ಟು ಕಮೀಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ವಿಚಾರ ಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತು.
ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಪಟ್ಟು: ಸಭೆಯಲ್ಲಿ ಕೆಆರ್‌ಐಡಿಎಲ್ ಕಾಮಗಾರಿಗಳ ಪ್ರಸ್ತಾಪವಾಗುತ್ತಿದ್ದಂತೆ ಮುನ್ನಲೆಗೆ ಬಂದ ಈ ವಿಚಾರದಲ್ಲಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಡಳಿತ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
"ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅವರೇ ಕೆಆರ್‌ಐಡಿಎಲ್‌ನಲ್ಲಿ ಬಿಲ್ ಪಾಸ್ ಮಾಡಲು ಶೇ.7ರಷ್ಟು ಕಮೀಷನ್ ವಸೂಲಿ ಮಾಡುತ್ತಿದ್ದಾರೆ ಎಂದು ಸಿಎಂಗೆ ಅಧಿಕೃತ ಪತ್ರ ಬರೆದಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಇಂತಹ ಗಂಭೀರ ಆರೋಪ ಮಾಡಿರುವಾಗ ಅಭಿವೃದ್ಧಿ ಕಾಮಗಾರಿಗಳ ಕಥೆ ಏನು? ಇಲಾಖಾ ಮಟ್ಟದ ತನಿಖೆ ಕಣ್ಣೊರೆಸುವ ತಂತ್ರವಾಗಿದ್ದು, ಈ ಭ್ರಷ್ಟಾಚಾರದ ವಿರುದ್ಧ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು" ಎಂದು ಡಾ. ಭರತ್ ಶೆಟ್ಟಿ ಆಗ್ರಹಿಸಿದರು.
60 ಪರ್ಸೆಂಟ್ ಸರ್ಕಾರ ಎಂದ ಹರೀಶ್ ಪೂಂಜಾ: ಎದ್ದುನಿಂತು ಮಾತನಾಡಿದ ಶಾಸಕ ಹರೀಶ್ ಪೂಂಜಾ, "ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಅವರದ್ದೇ ಶಾಸಕರು ಬಯಲಿಗೆಳೆದಿದ್ದಾರೆ. ಇದು 60 ಪರ್ಸೆಂಟ್ ಸರ್ಕಾರವಾಗಿದ್ದು, ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೇ ಈ ಬಗ್ಗೆ ತನಿಖೆಗೆ ನಿರ್ಣಯ ಕೈಗೊಳ್ಳಿ" ಎಂದು ಒತ್ತಾಯಿಸಿದರು.
'ಮಕ್ಕಳಾಟಿಕೆ' ಪದಪ್ರಯೋಗಕ್ಕೆ ತೀವ್ರ ಜಟಾಪಟಿ: ಪ್ರತಿಪಕ್ಷಗಳ ಗದ್ದಲದ ವೇಳೆ ಸಚಿವ ಯು.ಟಿ. ಖಾದರ್, "ಇದು ಮಕ್ಕಳಾಟಿಕೆ ಅಲ್ಲ, ಸಭೆ ನಿಯಮಾವಳಿ ಪ್ರಕಾರ ನಡೆಯಬೇಕು" ಎಂದಾಗ ಶಾಸಕರಾದ ಭರತ್ ಶೆಟ್ಟಿ ಮತ್ತು ಹರೀಶ್ ಪೂಂಜಾ ಕೆಂಡಾಮಂಡಲರಾದರು. "ಭ್ರಷ್ಟಾಚಾರ ಪ್ರಶ್ನಿಸಿದರೆ ಮಕ್ಕಳಾಟಿಕೆ ಎನ್ನುತ್ತೀರಾ? ಜನಪ್ರತಿನಿಧಿಗಳ ಧ್ವನಿಯನ್ನು ಹೀಗೆ ಹತ್ತಿಕ್ಕಬೇಡಿ" ಎಂದು ಆಸನದಿಂದ ಎದ್ದುನಿಂತು ಸಚಿವರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು.
ಸಚಿವ ಯು.ಟಿ. ಖಾದರ್ ಸ್ಪಷ್ಟನೆ: ಗದ್ದಲ ಶಮನಗೊಳಿಸಲು ಯತ್ನಿಸಿದ ಸಚಿವರು, "ಅಶೋಕ್ ಕುಮಾರ್ ರೈ ಅವರು ಪತ್ರ ಬರೆದ ಬೆನ್ನಲ್ಲೇ ಆರ್‌ಡಿಪಿಆರ್ ಸಚಿವರಿಗೆ ಪತ್ರ ಬರೆದು ಪರಿಶೀಲನೆಗೆ ಕೋರಿದ್ದೇನೆ. ಈಗಾಗಲೇ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಟ್ಟದ ಸಮಿತಿ ತನಿಖೆ ಆರಂಭಿಸಿದೆ. ಕೇವಲ ಯಾರೋ ಒಬ್ಬ ಗುತ್ತಿಗೆದಾರ ಹೇಳಿದ ಮಾತ್ರಕ್ಕೆ ಪ್ರಾಮಾಣಿಕ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಂದಿಸಬಾರದು. ಸತ್ಯಾಸತ್ಯತೆ ತಿಳಿಯಲು ಕಾನೂನು ಚೌಕಟ್ಟಿನಲ್ಲಿ ಯಾವ ತನಿಖಾ ಸಂಸ್ಥೆಗೆ ವಹಿಸಬೇಕೋ ಅದನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ" ಎಂದು ತಿಳಿಸಿ ಪರಿಸ್ಥಿತಿ ತರಲು ಪ್ರಯತ್ನಿಸಿದರು.
ಸಭೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ದ.ಕ ಜಿಲ್ಲಾ ಉಸ್ತುವಾರಿ ಅಧಿಕಾರಿ ತುಳಸಿ ಮದ್ದಿನೇನಿ, ದ.ಕ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ., ಜಿ.ಪಂ ಸಿಇಒ ವಿನಾಯಕ್ ನರ್ವಾಡೆ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಸ್ತೂರಿ ರಂಗನ್ ವರದಿ ಜಾರಿ ವಿರೋಧ ಹಾಗೂ ಸಭೆಗೆ ಗೈರುಹಾಜರಾದ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧವೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗಗಳು ನಡೆದವು.