ಮಂಗಳೂರು,ಸೆಪ್ಟೆಂಬರ್ 08: ಕಸಬಾ ಬೆಂಗ್ರೆಯ ಮುಖ್ಯ ರಸ್ತೆಯ ಹದಗೆಟ್ಟಿರುವ ಸುಮಾರು 300 ಮೀಟರ್ ರಸ್ತೆಯನ್ನು ಕೂಡಲೇ ಕಾಂಕ್ರೀಟೀಕರಣಗೊಳಿಸುವಂತೆ ಒತ್ತಾಯಿಸಿ ಡಿವೈಎಫ್‌ಐ (DYFI) ಬೆಂಗ್ರೆ 60ನೇ ವಾರ್ಡ್ ಘಟಕದ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ತೋಟ ಬೆಂಗ್ರೆಯಿಂದ ಕಸಬಾ ಬೆಂಗ್ರೆಯ ಮುಖ್ಯ ರಸ್ತೆಯ ಕರಾವಳಿ ಸ್ಟೋರ್‌ವರೆಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರಸ್ತೆ ಕಾಮಗಾರಿ ನಡೆದಿದೆ. ಆದರೆ, ಕರಾವಳಿ ಸ್ಟೋರ್‌ನಿಂದ ಸಲೀಂ ಅಂಗಡಿ ಸಮೀಪದವರೆಗೆ ಇರುವ ಸುಮಾರು 300 ಮೀಟರ್ ರಸ್ತೆ ಕಾಮಗಾರಿ ಇನ್ನೂ ಬಾಕಿ ಉಳಿದಿದೆ.
ಈ ಭಾಗದ ರಸ್ತೆ ತೀರಾ ಹದಗೆಟ್ಟು ಹಲವೆಡೆ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುತ್ತಿರುವುದರಿಂದ ವಾಹನ ಸವಾರರು ಹಾಗೂ ಸ್ಥಳೀಯ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈಗಾಗಲೇ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರುವ ಭಾಗದಲ್ಲಿ ಜಲಸಿರಿ ಯೋಜನೆಯ ಚೇಂಬರ್‌ಗಳ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿ ಸ್ಥಳಾವಕಾಶ ಬಿಟ್ಟು ಮಣ್ಣು ತುಂಬಿಸುವ ಕಾರ್ಯ ಅಪೂರ್ಣಗೊಂಡಿದ್ದು, ಅದನ್ನೂ ಕೂಡಲೇ ಪೂರ್ಣಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿಯಲ್ಲಿ DYFI ಉಲ್ಲೇಖಿಸಿರುವ ಪ್ರಮುಖ ಬೇಡಿಕೆಗಳು:
ಬಾಕಿ ಉಳಿದಿರುವ 300 ಮೀಟರ್ ರಸ್ತೆಯನ್ನು ಕೂಡಲೇ ಕಾಂಕ್ರೀಟೀಕರಣಗೊಳಿಸಬೇಕು.
ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆಯಲ್ಲಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿ ದುರಸ್ತಿ ಮಾಡಬೇಕು.
ಜಲಸಿರಿ ಯೋಜನೆಯ ಅಪೂರ್ಣಗೊಂಡ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.
ಈ ಮನವಿ ಸಲ್ಲಿಕೆಯ ಸಂದರ್ಭದಲ್ಲಿ DYFI ಬೆಂಗ್ರೆ ಗ್ರಾಮ ಸಮಿತಿ ಅಧ್ಯಕ್ಷ ರಿಝ್ವಾನ್ ಬೆಂಗ್ರೆ, ಕಾರ್ಯದರ್ಶಿ ಜಂಶೀರ್ ಬೆಂಗ್ರೆ, ಕೋಶಾಧಿಕಾರಿ ಮುಹಾಝ್ ಬೆಂಗ್ರೆ ಹಾಗೂ ಮುಖಂಡರಾದ ಹನಿಫ್ ಬೆಂಗ್ರೆ, ತೈಯೂಬ್ ಬೆಂಗ್ರೆ, ನಾಸಿರ್ ಬಾಸ್ ಮತ್ತು ಫಯಾಜ್ ಬೆಂಗ್ರೆ ಉಪಸ್ಥಿತರಿದ್ದರು.