ಮಂಗಳೂರು, ಸೆಪ್ಟೆಂಬರ್ 01: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯಿಂದ ಬಿದ್ದು ಆಂಧ್ರಪ್ರದೇಶ ಮೂಲದ ಯುವ ಮೀನುಗಾರನೊಬ್ಬ ನಾಪತ್ತೆಯಾಗಿದ್ದಾನೆ. ಈ ಕುರಿತು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶ ಮೂಲದ ಭಕ್ತನಿ ಕಿಶೋರ್ (19) ನಾಪತ್ತೆಯಾದ ಯುವಕ. ಸುಮಾರು ಒಂದು ತಿಂಗಳ ಹಿಂದಷ್ಟೇ ಮಂಗಳೂರಿಗೆ ಬಂದು ಮೀನುಗಾರಿಕೆ ವಲಯದಲ್ಲಿ ಕೆಲಸಕ್ಕೆ ಸೇರಿದ್ದ ಈತ, ಮೊಹಮ್ಮದ್ ಫೈಜಲ್ ಒಡೆತನದ ದೋಣಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಆಗಸ್ಟ್ 23 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಒಟ್ಟು 12 ಸಿಬ್ಬಂದಿಯನ್ನು ಹೊತ್ತ ದೋಣಿಯು ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿತ್ತು. ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ, ಆಗಸ್ಟ್ 25 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕಿಶೋರ್ ಹಗ್ಗದ ಸಹಾಯದಿಂದ ದೋಣಿಯ ಅಂಚಿನಲ್ಲಿ ಕುಳಿತಿದ್ದನು. ಆ ಸಂದರ್ಭದಲ್ಲಿ ಅಪ್ಪಳಿಸಿದ ಬಲವಾದ ಸಮುದ್ರ ಅಲೆಯ ಹೊಡೆತಕ್ಕೆ ಆಯತಪ್ಪಿ ಆತ ಸಮುದ್ರಕ್ಕೆ ಬಿದ್ದಿದ್ದಾನೆ.
ಕೂಡಲೇ ದೋಣಿಯಲ್ಲಿದ್ದ ಇತರ ಮೀನುಗಾರರು ಹಾಗೂ ಸಮೀಪದಲ್ಲಿದ್ದ ಇತರೆ ದೋಣಿಯ ಸಿಬ್ಬಂದಿಗೆ ವಿಷಯ ಮುಟ್ಟಿಸಲಾಗಿದ್ದು, ಎಲ್ಲರೂ ಸೇರಿ ಸಮುದ್ರದಲ್ಲಿ ಬಲೆ ಬೀಸಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆದರೂ ಕಿಶೋರ್ ಪತ್ತೆಯಾಗಿಲ್ಲ ಎಂದು ನಾಪತ್ತೆಯಾದ ಯುವಕರ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಾಹಿತಿ ನೀಡಿದ್ದಾರೆ. ಪಾಂಡೇಶ್ವರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.