BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru court ಮನೆ ಕಟ್ಟಿಸಿಕೊಡುವುದಾಗಿ ವಂಚನೆ ಹಾಗೂ ಜಾತಿ ನಿಂದನೆ: ಆರೋಪಿಗೆ ರೂ. 15.6 ಲಕ್ಷ ದಂಡ ವಿಧಿಸಿ ಮಂಗಳೂರು ನ್ಯಾಯಾಲಯ ತೀರ್ಪು


ಮಂಗಳೂರು, ಸೆಪ್ಟೆಂಬರ್ 02: ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ ಲಕ್ಷಾಂತರ ರೂ. ಮುಂಗಡ ಪಡೆದು, ಬಳಿಕ ಮನೆಯನ್ನೂ ಕಟ್ಟಿಸಿಕೊಡದೆ, ಹಣವನ್ನೂ ವಾಪಸ್ ನೀಡದೆ ಸತಾಯಿಸಿ ಹಾಗೂ ಹಣದ ಕುರಿತು ಪ್ರಶ್ನಿಸಿದಾಗ ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಆರೋಪಿಗೆ ದಂಡ ಹಾಗೂ ಶಿಕ್ಷೆ ವಿಧಿಸಿ ಆದೇಶಿಸಿದೆ.

ಸಿಪ್ರಿಯಾನ್ ಡಿಸೋಜ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರೋಪಿ. 

ಪ್ರಕರಣದ ಹಿನ್ನೆಲೆ ಏನು?

ದೂರುದಾರರಾದ ಜಯಂತ್ ನಾಯ್ಕ, ಮನೋಜ್ ಮತ್ತು ವಾಸುದೇವ ಎಂಬವರಿಗೆ 1250 ಚದರ ಅಡಿಯ ಸುಂದರ ಮನೆ ಹಾಗೂ ಜಾಗ ಸೇರಿ ಒಟ್ಟು 30 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆರೋಪಿ ಸಿಪ್ರಿಯಾನ್ ಡಿಸೋಜ 2017ರ ಜೂನ್ 28ರಂದು ಮೂವರೊಂದಿಗೆ ಕರಾರು ಪತ್ರ ಮಾಡಿಸಿಕೊಂಡು, ಒಂದು ವರ್ಷದೊಳಗೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ ಮುಂಗಡ ಹಣ ಪಡೆದಿದ್ದ.

ಆದರೆ, ಮಾತು ಕೊಟ್ಟಂತೆ ಒಂದು ವರ್ಷ ಕಳೆದರೂ ಮನೆ ನಿರ್ಮಿಸಿಕೊಡಲಿಲ್ಲ. ಸಂತ್ರಸ್ತರು ಮುಂಗಡ ಹಣವನ್ನು ವಾಪಸ್ ಕೇಳಿದಾಗ ಆರೋಪಿ ಹಿಂದೇಟು ಹಾಕುತ್ತಾ ಬಂದಿದ್ದ.

ಜಾತಿ ನಿಂದನೆ ಮತ್ತು ಪೊಲೀಸ್ ತನಿಖೆ:

ಹಣ ಮತ್ತು ಮನೆಯ ಬಗ್ಗೆ ವಿಚಾರಿಸಲು 2021ರ ಜನವರಿ 20ರಂದು ಮೂವರು ಸಂತ್ರಸ್ತರು ಪುತ್ತಿಗೆ ಗ್ರಾಮದ ಮಿತ್ತಬೈಲಿನಲ್ಲಿರುವ ಸಿಪ್ರಿಯಾನ್ ಡಿಸೋಜನ ಮನೆಗೆ ತೆರಳಿದ್ದರು. ಈ ವೇಳೆ ಕೋಪಗೊಂಡ ಆರೋಪಿ ಸಿಪ್ರಿಯಾನ್ ಡಿಸೋಜ, ಸಾರ್ವಜನಿಕ ಸ್ಥಳದಲ್ಲೇ ಅವರನ್ನು ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದನು.

ಈ ಘಟನೆ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಸಹಾಯಕ ಪೊಲೀಸ್ ಆಯುಕ್ತರಾದ ಎಸ್‌. ಮಹೇಶ್ ಕುಮಾರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ ವಿ.ಎನ್., ಒಟ್ಟು 19 ಸಾಕ್ಷಿದಾರರ ಪೈಕಿ 13 ಸಾಕ್ಷಿದಾರರನ್ನು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.

ಆರೋಪಿ ಸಿಪ್ರಿಯಾನ್ ಡಿಸೋಜ ಒಟ್ಟು ರೂ. 15,60,000 ದಂಡ ಪಾವತಿಸಬೇಕೆಂದು ಆದೇಶಿಸಿದ್ದು, ದಂಡ ಪಾವತಿಸಲು ವಿಫಲವಾದರೆ 3 ವರ್ಷಗಳ ಸಾದಾ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ದಂಡದ ಮೊತ್ತವನ್ನು ನ್ಯಾಯಾಲಯ ಹಂಚಿಕೆ ಮಾಡಿದ್ದು ಜಯಂತ್ ಬಿ. ನಾಯ್ಕಗೆ ರೂ. 6,00,000, ಮನೋಜ್ ಗೆ ರೂ. 6,00,000, ವಾಸುದೇವಗೆ ರೂ. 3,50,000 ಮತ್ತು  ಸರ್ಕಾರಕ್ಕೆ10,000 ಮೊತ್ತ ಪಾವತಿಸಬೇಕು ಎಂದಿದೆ.

ಆರೋಪಿಗೆ ದಂಡದ ಮೊತ್ತವನ್ನು ಪಾವತಿಸಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿದೆ 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!