ಮಂಗಳೂರು, ಸೆ 26:ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರ ಪಕ್ಷಪಾತ ಧೋರಣೆ ಖಂಡಿಸಿ ಮತ್ತು ಅವರ ರಾಜೀನಾಮೆಗೆ ಒತ್ತಾಯಿಸಿ ಸೆಪ್ಟೆಂಬರ್ 28ರಂದು ಬೆಳಗ್ಗೆ 10:30ಕ್ಕೆ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪಂಪ್‌ವೆಲ್ ಜಂಕ್ಷನ್‌ನಿಂದ ಪಡೀಲ್ ಪ್ರಜಾಸೌಧದ ತನಕ ಬೃಹತ್ ಮೆರವಣಿಗೆ ನಡೆಸಿ, ಬಳಿಕ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾಪ್ರಭುತ್ವದ ಅಡಾಯವಾಗಿರುವ ಚುನಾವಣಾ ಆಯೋಗವು ಪಕ್ಷಪಾತ ಧೋರಣೆ ತೋರುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಯಿತು.
ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಈ ಹಿಂದೆಯೇ ಎತ್ತಿದ್ದ 'ವೋಟ್ ಚೋರಿ' (ಮತ ಕಳವು) ಆರೋಪಗಳು ಮಹಾರಾಷ್ಟ್ರ ಹಾಗೂ ಕರ್ನಾಟಕದ ಮಹಾದೇವಪುರ ಕ್ಷೇತ್ರದ ಅಕ್ರಮಗಳಿಂದ ನಿಜವೆಂದು ಸಾಬೀತಾಗುತ್ತಿವೆ ಎಂದು ಪದ್ಮರಾಜ್ ವಾಗ್ದಾಳಿ ನಡೆಸಿದರು.
ತುಳುನಾಡಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವುದು ತುಳುನಾಡಿನ ಜನರ ಅಸ್ಮಿತೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಆದರೆ ಮಾಜಿ ಸಂಸದ ಪ್ರತಾಪ್‌ಸಿಂಹ ‘ಇದರಿಂದ ಏನು ಲಾಭ?’ ಎನ್ನುವ ಮೂಲಕ ಜನರ ಭಾವನೆಗೆ ಧಕ್ಕೆ ತಂದಿದ್ದು, ಕೂಡಲೇ ತುಳುನಾಡಿನ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಗ್ಯಾರಂಟಿಗಳನ್ನು ಅಪಹಾಸ್ಯ ಮಾಡಿದ್ದ ಬಿಜೆಪಿ ನಾಯಕರು, ಅದೇ ಯೋಜನೆಗಳನ್ನು ಮೋದಿ ಗ್ಯಾರಂಟಿ ಹೆಸರಿನಲ್ಲಿ ಬೇರೆ ರಾಜ್ಯಗಳಲ್ಲಿ ಕಾಪಿ ಮಾಡುತ್ತಿದ್ದಾರೆ ಹೊರತು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೊಳಿಸಲು ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಮಮತಾ ಗಟ್ಟಿ, ಅಪ್ಪಿ, ಲ್ಯಾನ್ಸಿಲೋಟ್ ಪಿಂಟೊ, ಶಶಿಧರ ಹೆಗ್ಡೆ, ಅನಿಲ್ ಕುಮಾರ್, ಮೋಹನ್ ಕೋಟ್ಯಾನ್, ಅಬ್ದುಲ್ ಸಲೀಮ್, ಶುಭೋದಯ ಆಳ್ವ, ಸುಭಾಸ್ ಶೆಟ್ಟಿ, ಪುರುಷೋತ್ತಮ ಚಿತ್ರಾಪುರ, ಅಶೋಕ್ ಡಿ.ಕೆ. ಮತ್ತಿತರರು ಉಪಸ್ಥಿತರಿದ್ದರು.