ಮಂಗಳೂರು, ಸೆ 27 : ಕಳೆದ 2025ರ ಮೇ ತಿಂಗಳಲ್ಲಿ ನಡೆದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಸಂಚು ರೂಪಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಗೆ 24 ಲಕ್ಷ ರೂ. ಸುಪಾರಿ ನೀಡುವ ಆಮಿಷವೊಡ್ಡಿರುವ ಆರೋಪದಡಿ ಉಡುಪಿಯ ಸುದೀಪ್ ಹಾಗೂ ಇತರರ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ ಮತ್ತು ದೂರಿನ ವಿವರ
ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಮಿತ್ತೊಟ್ಟು ನಿವಾಸಿ ಅಭಿಷೇಕ್ (25) ನೀಡಿರುವ ಲಿಖಿತ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 55 ಹಾಗೂ 61(2)(a) ಅಡಿ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮುಂದಿನ ತನಿಖೆಯನ್ನು ಸಿಸಿಬಿ (CCB) ಪೊಲೀಸರಿಗೆ ವಹಿಸಲಾಗಿದೆ.
ದೂರುದಾರ ಅಭಿಷೇಕ್‌ಗೆ ಉಡುಪಿಯ ಸುದೀಪ್ ಪರಿಚಯವಿದ್ದನು. ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಪ್ರತೀಕಾರ ತೀರಿಸಿಕೊಳ್ಳಲು ನಾಲ್ಕು ತಿಂಗಳ ಹಿಂದೆ ಉಡುಪಿಯ ಹೋಟೆಲ್ ಒಂದರಲ್ಲಿ ಸಭೆ ನಡೆಸಿ, ರೌಡಿ ಹಿನ್ನೆಲೆಯ ಮಹೇಶ್ ಎಂಬಾತನನ್ನು ಪರಿಚಯಿಸಲಾಗಿತ್ತು.
ಕೃತ್ಯ ಪೂರ್ಣಗೊಳಿಸಿದರೆ 24 ಲಕ್ಷ ರೂ. ನೀಡುವುದಾಗಿ ಹಾಗೂ ಜೈಲಿಗೆ ಹೋದರೆ ಪ್ರತಿ ತಿಂಗಳು ಮನೆಗೆ 5,000 ರೂ. ಮೌಲ್ಯದ ದಿನಸಿ ಹಾಗೂ 15,000 ರೂ. ಮನೆ ಖರ್ಚಿನ ಹಣ ತಲುಪಿಸುವುದಾಗಿ ಸುದೀಪ್ ಆಮಿಷವೊಡ್ಡಿದ್ದನು.
ಬಜಪೆಯ ಕಿನ್ನಿಪದವಿನ ವ್ಯಕ್ತಿಯೊಬ್ಬನ ಫೋಟೋ ಕಳುಹಿಸಿ, ಆತನ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿ ಕಾರಿನ ಖರ್ಚಿಗೆ ಯುಪಿಐ ಮೂಲಕ 2,000 ರೂ. ಕಳುಹಿಸಿಕೊಡಲಾಗಿತ್ತು. ಕೃತ್ಯಕ್ಕಾಗಿ ಅಭಿಷೇಕ್ ಮನೆಯಲ್ಲಿ 2 ತಲವಾರುಗಳನ್ನು ಸಿದ್ಧವಾಗಿರಿಸಿಕೊಂಡಿದ್ದರು.
ಸುದೀಪ್ ಕೃತ್ಯಕ್ಕೆ ಒತ್ತಡ ಹೇರುತ್ತಿದ್ದ ಸಂದರ್ಭದಲ್ಲಿಯೇ ಅಭಿಷೇಕ್ ಪತ್ನಿಗೆ ಹೆರಿಗೆಯಾಗಿತ್ತು. ಕ್ರಿಮಿನಲ್ ಕೃತ್ಯದಿಂದ ಕುಟುಂಬ ಅನಾಥವಾಗುತ್ತದೆ ಎಂದು ಅರಿತುಕೊಂಡ ಅಭಿಷೇಕ್, ಕೃತ್ಯದಿಂದ ಹಿಂದೆ ಸರಿದು ವಾಟ್ಸ್ಆ್ಯಪ್ ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳು ಹಾಗೂ ಮೊಬೈಲ್ ಸಾಕ್ಷ್ಯಗಳ ಸಮೇತ ಬಜಪೆ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ.
ಪೊಲೀಸ್ ಆಯುಕ್ತರ ಸ್ಪಷ್ಟನೆ:
"ಪ್ರಕರಣದಲ್ಲಿ ಸದ್ಯಕ್ಕೆ ಯಾರೊಬ್ಬರನ್ನೂ ಬಂಧಿಸಿಲ್ಲ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಸತ್ಯಾಸತ್ಯತೆ ತಿಳಿಯಲು ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ನ್ಯಾಯಾಲಯಕ್ಕೆ ಮಾನ್ಯವಾಗುವಂತಹ ಸಾಕ್ಷ್ಯಗಳನ್ನು ಕಲೆಹಾಕಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ."
— ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ನಗರ ಪೊಲೀಸ್ ಆಯುಕ್ತರು.
ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಮಂಗಳೂರಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಕ್ರಾಸ್ ಬಳಿ 2025ರ ಮೇ 1ರಂದು ರಾತ್ರಿ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿತ್ತು. ಆರಂಭಿಕ ತನಿಖೆಯಲ್ಲಿ ಮಂಗಳೂರು ನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಬಂಧಿಸಿದ್ದರು. ಬಳಿಕ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿತ್ತು. ಜೂನ್ 2025ರಲ್ಲಿ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಲಾಯಿತು. ಎನ್ಐಎ 2025ರ ಅಕ್ಟೋಬರ್ 29ರಂದು 11 ಬಂಧಿತ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.