BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru 2023ರಿಂದ ದೇಶದ ಚುನಾವಣಾ ಆಯೋಗದ ಎಲ್ಲಾ ಪ್ರಕ್ರಿಯೆಗಳು ಸುಪ್ರೀಂ ಕೋರ್ಟ್ ನಿಂದ ತನಿಖೆ ಮಾಡಲು ನಟ ಪ್ರಕಾಶ್ ರಾಜ್ ಆಗ್ರಹ


ಮಂಗಳೂರು,ಸೆ 28 : ರಾಜ್ಯದಲ್ಲಿ ನಡೆಯುತ್ತಿರುವ ದೋಷಪೂರಿತ ಎಸ್‌ಐಆರ್ (SIR) ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಹಾಗೂ 2023ರಿಂದ ದೇಶದ ಚುನಾವಣಾ ಆಯೋಗದ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆ ನಡೆಸಬೇಕು ಎಂದು ಖ್ಯಾತ ಚಲನಚಿತ್ರ ನಟ ಹಾಗೂ ರಾಜ್ಯದ ಎಸ್‌ಐಆರ್ ಪರಿಶೋಧ ಮತ್ತು ಪ್ರತಿರೋಧ ಸಂಘಟನೆಯ ಮುಖಂಡ ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1950ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಚುನಾವಣಾ ಆಯೋಗವು ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ 13 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿದೆ ಎಂದು ಆರೋಪಿಸಿದರು. ಆದರೆ ನುಸುಳುಕೋರರು ಎಷ್ಟು ಮಂದಿ ಇದ್ದಾರೆ ಎಂಬ ಅಧಿಕೃತ ಪಟ್ಟಿಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ ಎಂದರು.

ಕರ್ನಾಟಕದಲ್ಲಿ ಐದೂವರೆ ಕೋಟಿ ಮತದಾರರಿದ್ದು, ಈ ಪ್ರಕ್ರಿಯೆ ಪೂರ್ಣಗೊಳಿಸಲು ಚುನಾವಣಾ ಆಯೋಗ ಕೇವಲ ಒಂದು ತಿಂಗಳ ಗಡುವು ನೀಡಿ ಬಳಿಕ 15 ದಿನ ಮಾತ್ರ ವಿಸ್ತರಿಸಿದೆ. ರಾಜ್ಯ ಸರ್ಕಾರ ಹೆಚ್ಚಿನ ಸಮಯ ಕೋರಿದರೂ ಆಯೋಗದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೀವಂತ ಇರುವವರನ್ನು ಸತ್ತವರ ಪಟ್ಟಿಗೆ ಸೇರಿಸುವುದು, ಗಣತಿದಾರರು ಬಂದಾಗ ಮನೆಯಲ್ಲಿ ಇಲ್ಲದವರ ಹೆಸರು ಕೈಬಿಡುವುದು, ಅನಾರೋಗ್ಯ ಪೀಡಿತರು, ಅನಕ್ಷರಸ್ಥರು, ಲಿಂಗ ಪರಿವರ್ತನೆಗೊಂಡವರು ಹಾಗೂ ಅಗತ್ಯ ದಾಖಲೆ ಹೊಂದಿಲ್ಲದ ಭಾರತೀಯ ಪ್ರಜೆಗಳು ಮತದಾರರ ಪಟ್ಟಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಬಿಎಲ್‌ಒಗಳಿಗೆ ಮಾಹಿತಿಯ ಕೊರತೆ ಇರುವುದು ಹಾಗೂ ಫಾರಂ 6 ಮತ್ತು 8 ಭರ್ತಿ ಮಾಡುವಲ್ಲಿನ ಗೊಂದಲದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದು, ಇದರಿಂದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಕಗ್ಗೋಲೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಂಸತ್ ಅಧಿವೇಶನದಲ್ಲಿ ಸಂಸದರು ಆಯುಕ್ತರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು.

https://youtube.com/shorts/4wKNXkkQrFQ?feature=share

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!