ಮಂಗಳೂರು, ಸೆಪ್ಟೆಂಬರ್ 12: ಕೇಶವ ಸ್ಮೃತಿ ಸಂವರ್ಧನ ಟ್ರಸ್ಟ್ (ರಿ.) ಇದರ ಆಶ್ರಯದಲ್ಲಿ ಮಂಗಳೂರಿನ ಪ್ರತಾಪನಗರದ ಸಂಘನಿಕೇತನದಲ್ಲಿ ನಡೆಯುವ 79ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಚರಣೆಯು ದಿನಾಂಕ 14.09.2026ನೇ ಸೋಮವಾರದಿಂದ 18.09.2026ನೇ ಶುಕ್ರವಾರದವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಉತ್ಸವದ ಯಶಸ್ವಿ ನಿರ್ವಹಣೆಗಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಐದು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ:
ಸೆಪ್ಟೆಂಬರ್ 14 (ಸೋಮವಾರ) - ಉದ್ಘಾಟನಾ ದಿನ:
ಬೆಳಿಗ್ಗೆ 10:00 ಗಂಟೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯ ಕ್ಷೇತ್ರ ಪ್ರಚಾರಕರಾದ ಶ್ರೀ ಭರತ್ ಕುಮಾರ್ ಅವರು ಉತ್ಸವವನ್ನು ಉದ್ಘಾಟಿಸಲಿದ್ದು, ನಂತರ ಗಣಹೋಮ ನಡೆಯಲಿದೆ. ಸಂಜೆ 6:45ಕ್ಕೆ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್(ರಿ.) ಅಧ್ಯಕ್ಷರಾದ ಶ್ರೀ ಅರ್ಜುನ್ ಭಂಡಾರ್‌ಕರ್ ಅವರ ಅಧ್ಯಕ್ಷತೆಯಲ್ಲಿ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ. ರಾತ್ರಿ 7:45ರಿಂದ ಮೂಡಗಣಪತಿ ಸೇವೆ ಹಾಗೂ ರಂಗಪೂಜೆ ಜರುಗಲಿದೆ.
ಸೆಪ್ಟೆಂಬರ್ 15 (ಮಂಗಳವಾರ):
ಪೂರ್ವಾಹ್ನ 10:00ರಿಂದ “ಯುವಸಮಾವೇಶ” ನಡೆಯಲಿದೆ. ಸಂಜೆ 6:00 ಗಂಟೆಗೆ ಶ್ರೀ ಪಾಂಚಜನ್ಯ ಪ್ರತಿಷ್ಠಾನದಿಂದ “ಸಪ್ತಕ್ಷೇತ್ರ ಮಹಾತ್ಮೆ” ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿ (ದ.ಕ. ಜಿಲ್ಲೆ) ಅಧ್ಯಕ್ಷರಾದ ಶ್ರೀ ಅಂ. ಶಾಂತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಸೆಪ್ಟೆಂಬರ್ 16 (ಬುಧವಾರ):
ಮುಂಜಾನೆ 5:00 ಗಂಟೆಗೆ “ಉಷಃಕಾಲ ಪೂಜೆ” ಹಾಗೂ ಮಧ್ಯಾಹ್ನ 1:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6:00 ಗಂಟೆಗೆ ವಿದುಷಿ ವೈಷ್ಣವಿ ಪ್ರಭು ಹಾಗೂ ಗಂಜಿಮಠದ ನಟನಂ ನೃತ್ಯ ವಿದ್ಯಾಲಯದ ಶಿಷ್ಯವೃಂದದಿಂದ “ಶ್ರೀ ಗಣೇಶಾಮೃತ” ಭರತನಾಟ್ಯ ನೃತ್ಯರೂಪಕ ಪ್ರಸ್ತುತಗೊಳ್ಳಲಿದೆ. ಕೆನರಾ ಬ್ಯಾಂಕ್ ವೃತ್ತಕಛೇರಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಮಂಜುನಾಥ್ ಬಿ. ಸಿಂಗೈ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ಸೆಪ್ಟೆಂಬರ್ 17 (ಗುರುವಾರ):
ಮಧ್ಯಾಹ್ನ 2:30ರಿಂದ “ಮಹಿಳಾ ಸಮಾವೇಶ” ಏರ್ಪಡಿಸಲಾಗಿದೆ. ಸಂಜೆ 6:00 ಗಂಟೆಗೆ ಧಾರವಾಡದ ಪ್ರಸಿದ್ಧ ಗಾಯಕರಾದ ಡಾ. ವಿಜಯಕುಮಾರ ಪಾಟೀಲ್ ಇವರಿಂದ “ಭಜನ್ ಸಂಧ್ಯಾ” ಕಾರ್ಯಕ್ರಮ ನಡೆಯಲಿದೆ. ನಿಧಿ ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್ ಇಂಡಿಯಾ ಪ್ರೈ.ಲಿ. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಶಾಂತ್ ಕೆ. ಸನಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 18 (ಶುಕ್ರವಾರ) - ವಿಸರ್ಜನಾ ದಿನ:
ಮಧ್ಯಾಹ್ನ 1:15ಕ್ಕೆ ವಿಸರ್ಜನಾ ಪೂಜೆ ಹಾಗೂ ಸಂಜೆ 5:30ಕ್ಕೆ ಸಂಕಲ್ಪ ಕಾರ್ಯಕ್ರಮ ಜರುಗಲಿದೆ. ಸಂಜೆ 6:15ಕ್ಕೆ ಶ್ರೀ ಮಹಾಗಣಪತಿಯ ಶೋಭಾಯಾತ್ರೆಯು ಸಂಘನಿಕೇತನದಿಂದ ಹೊರಟು ಮಣ್ಣಗುಡ್ಡ, ನ್ಯೂ ಚಿತ್ರಾ ಜಂಕ್ಷನ್, ರಥಬೀದಿ ಮೂಲಕ ಸಾಗಿ ಶ್ರೀ ಮಹಾಮಾಯಾ ದೇವಸ್ಥಾನದ ಕೆರೆಯಲ್ಲಿ ಸಮಾಪನಗೊಳ್ಳಲಿದೆ. ಶ್ರೀ ಬಬ್ಬುಸ್ವಾಮಿ ಸೇವಾಸಮಿತಿ, ಕಾನ-ಕಲ ಇದರ ಪ್ರಧಾನ ಅರ್ಚಕರಾದ ಶ್ರೀ ಎಸ್. ಸುಂದರ್ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಉತ್ಸವದ ಅವಧಿಯಲ್ಲಿ ಪ್ರತಿದಿನ ಮಂಗಳೂರು ಹಾಗೂ ಸುತ್ತಮುತ್ತಲಿನ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ಜರುಗಲಿದೆ. ಮೊದಲ ದಿನವನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಮಧ್ಯಾಹ್ನ ಪೂಜೆ ಮಧ್ಯಾಹ್ನ 1:15ಕ್ಕೆ ಹಾಗೂ ರಾತ್ರಿ ಪೂಜೆ ರಾತ್ರಿ 8:30ಕ್ಕೆ ನೆರವೇರಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಕಾರ್ಯದರ್ಶಿ ಜಿ. ಸುರೇಶ್ ಕಾಮತ್ ಪ್ರಕಟಣೆಯಲ್ಲಿ ಕೋರಿದ್ದಾರೆ.