ಮಂಡ್ಯ, ಸೆಪ್ಟೆಂಬರ್ 15: ಚೌತಿ ಹಬ್ಬ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಹಿಂದಿನಿಂದ ಭೀಕರವಾಗಿ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ಮೂಲತಃ ಕೊಪ್ಪ ಗ್ರಾಮದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದ ಮುತ್ತುರಾಜು (35), ಅವರ ಪತ್ನಿ ಕಾವ್ಯಾ (35) ಹಾಗೂ ಪುತ್ರಿ ಕೀರ್ತನಾ (8) ದುರ್ಮರಣಕ್ಕೀಡಾದ ದುರ್ದೈವಿಗಳಾಗಿದ್ದಾರೆ. ದಂಪತಿಯ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಚೌತಿ ಹಬ್ಬದ ನಿಮಿತ್ತ ಮುತ್ತುರಾಜು ಅವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಸ್ವಗ್ರಾಮ ಕೊಪ್ಪಕ್ಕೆ ಆಗಮಿಸಿದ್ದರು. ಹಬ್ಬವನ್ನು ಸಂಭ್ರಮದಿಂದ ಮುಗಿಸಿಕೊಂಡು ಮಂಗಳವಾರ ಮುಂಜಾನೆ 5:0ಎರಡು ಗಂಟೆಯ ಸುಮಾರಿಗೆ ಅವರು ಸ್ಕೂಟರ್‌ನಲ್ಲಿ ಬೆಂಗಳೂರಿಗೆ ವಾಪಸ್ ಹೊರಟಿದ್ದರು. ಆ ಸಂದರ್ಭದಲ್ಲಿ ಹಿಂದಿನಿಂದ ಅತಿವೇಗವಾಗಿ ಬಂದ ಹಾಲಿನ ಟ್ಯಾಂಕರ್ ಸ್ಕೂಟರ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಪತಿ ಮುತ್ತುರಾಜು ಹಾಗೂ ಪತ್ನಿ ಕಾವ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ 8 ವರ್ಷದ ಬಾಲಕಿ ಕೀರ್ತನಾಳನ್ನು ಮಂಡ್ಯ ಮಿಮ್ಸ್ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾಳೆ. ತೀವ್ರವಾಗಿ ಗಾಯಗೊಂಡಿರುವ ಮತ್ತೊಂದು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪರಾರಿಯಾದ ಟ್ಯಾಂಕರ್ ಚಾಲಕ:
ಅಪಘಾತ ಎಸಗಿದ ಬಳಿಕವೂ ವಾಹನ ನಿಲ್ಲಿಸದೆ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕೊಪ್ಪ ಗ್ರಾಮದ ವಲಯದ ಮದ್ದೂರು ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ರಸ್ತೆಯ ಎದುರುಗಡೆ ಇರುವ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ.
ಮಾಹಿತಿ ತಿಳಿದ ಕೂಡಲೇ ಕೊಪ್ಪ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಟ್ಯಾಂಕರ್ ಹಾಗೂ ಚಾಲಕನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.