BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Kerala : 8 students dead in Road accident ಕೇರಳದಲ್ಲಿ ಭೀಕರ ರಸ್ತೆ ಅಪಘಾತ: ತಮಿಳುನಾಡಿನ 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ


ತ್ರಿಶೂರ್, ಸೆಪ್ಟೆಂಬರ್ 05: ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.

ತಮಿಳುನಾಡಿನ ದಿಂಡಿಗಲ್ ಮೂಲದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು, ತ್ರಿಶೂರ್ ಜಿಲ್ಲೆಯ ಕಾಯಪಮಂಗಲಂ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ (NH-66) ಅಕ್ರಮವಾಗಿ ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಶುಕ್ರವಾರ ರಾತ್ರಿ ಸುಮಾರು 11:40ರ ಸುಮಾರಿಗೆ ಪಾನಂಬಿಕುನ್ನು ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

ಕಾರು ಗುರುವಾಯೂರಿನಿಂದ ಕೊಡುಂಗಲ್ಲೂರು ತೆರಳುತ್ತಿತ್ತು. ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಸ್ಥಳದಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಈ ಬ್ಯಾರಿಕೇಡ್ ಬಳಿ ಮಹಾರಾಷ್ಟ್ರ ನೋಂದಣಿಯ ಲಾರಿಯನ್ನು ಹೆದ್ದಾರಿಯ ಬಲ ಬದಿಯಲ್ಲಿ ಅಕ್ರಮವಾಗಿ ನಿಲ್ಲಿಸಲಾಗಿತ್ತು. ಅತಿ ವೇಗವಾಗಿ ಬಂದ ಕಾರಿನ ಚಾಲಕನಿಗೆ ಮಾರ್ಗ ಬದಲಾವಣೆಯ ಬ್ಯಾರಿಕೇಡ್ ಹಾಗೂ ನಿಂತಿದ್ದ ಲಾರಿ ಸರಿಯಾಗಿ ಗಮನಕ್ಕೆ ಬಾರದೆ, ನೇರವಾಗಿ ಲಾರಿಯ ಹಿಂದಿನ ಭಾಗಕ್ಕೆ ಭೀಕರವಾಗಿ ಗುದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ತೀವ್ರತೆಗೆ ಆರು ವಿದ್ಯಾರ್ಥಿಗಳು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತರನ್ನು ತಮಿಳುನಾಡಿನ ದಿಂಡಿಗಲ್ ಮೂಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಈ ಪೈಕಿ ಸೂರ್ಯ, ಯುವಸಂಜಿತ್, ವಿಶ್ವ ಹಾಗೂ ಜೋಷುವಾ (ದಿಂಡಿಗಲ್) ಹಾಗೂ ಸಂತೋಷ್ ಮತ್ತು ಪ್ರಸನ್ನ (ಮಧುರೈ) ಎಂದು ಆರು ಮಂದಿಯ ಗುರುತು ಪತ್ತೆಯಾಗಿದೆ. ಇನ್ನುಳಿದ ಇಬ್ಬರ ವಿವರಗಳು ಇನ್ನಷ್ಟೇ ದೃಢಪಡಬೇಕಿದೆ.

ಸ್ಥಳೀಯ ನಿವಾಸಿಗಳು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಜ್ಜುಗುಜ್ಜಾದ ಕಾರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಲಾರಿ ಚಾಲಕ ಪರಾರಿ: ಈ ಸಂಬಂಧ ಕಾಯಪಮಂಗಲಂ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105ರ ಅಡಿಯಲ್ಲಿ ಕೊಲೆಗೆ ಸಮಾನವಲ್ಲದ ನರಹತ್ಯೆ (Culpable homicide) ಪ್ರಕರಣ ದಾಖಲಿಸಲಾಗಿದೆ. ಅಪಘಾತದ ಬಳಿಕ ಲಾರಿ ಚಾಲಕ ತಲೆಮರೆಸಿಕೊಂಡಿದ್ದು, ಪೊಲೀಸರು ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಬಳಿ ಇದ್ದ ಗುರುತಿನ ಚೀಟಿ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಪೋಷಕರು ತ್ರಿಶೂರ್ ತಲುಪಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!