ಕಾರ್ಕಳ, ಸೆಪ್ಟೆಂಬರ್ 24: ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ಹಾಗೂ ಖ್ಯಾತ ಕ್ರಿಕೆಟ್ ವೀಕ್ಷಕ ವಿವರಣೆಗಾರ (ಕಾಮೆಂಟೇಟರ್) ರವಿಶಾಸ್ತ್ರಿ ಅವರು ಸೆಪ್ಟೆಂಬರ್ 24ರಂದು ಕಾರ್ಕಳ ತಾಲೂಕಿನ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮೂಲತಃ ಕರ್ವಾಲು ಕ್ಷೇತ್ರದವರೇ ಆದ ರವಿಶಾಸ್ತ್ರಿ ಅವರು, ಕಳೆದ 17 ವರ್ಷಗಳಿಂದ ತಪ್ಪದೇ ಪ್ರತಿವರ್ಷ ತಮ್ಮ ಜನ್ಮಭೂಮಿಯ ಈ ಕ್ಷೇತ್ರಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಈ ಬಾರಿಯೂ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಹಾವಿಷ್ಣುಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವುದರ ಜೊತೆಗೆ, ನಾಗಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ನೆರವೇರಿಸಿ ಹರಕೆ ತೀರಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತಸರ ಕೆ. ಅನಂತಪಟ್ಟಾಭಿ ರಾವ್, ಆಡಳಿತ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಉಪಾಧ್ಯಕ್ಷ ಸುಧಾಕರ್ ಹೆಗ್ಡೆ, ಸಂತೋಷ್ ಶಾಸ್ತ್ರಿ, ಕವಿತಾ ಶಾಸ್ತ್ರಿ, ಸಂದೀಪ್ ಶೆಟ್ಟಿ ಯರ್ಲಪಾಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಇದಲ್ಲದೆ ದೇವಸ್ಥಾನದ ತಂತ್ರಿಗಳಾದ ನರಸಿಂಹ ತಂತ್ರಿ, ಅರ್ಚಕರಾದ ವರದರಾಜ ತಂತ್ರಿ ಬೈಲೂರು, ಅಶೋಕ್ ಕಾರಂತ, ಮೋಹನ್ ದಾಸ್ ಹೆಗ್ಡೆ ಜಾರ್ಕಳ, ಉದಯ ಕುಮಾರ್ ಹೆಗ್ಡೆ ಯರ್ಲಪಾಡಿ, ಕಮಲಾಕ್ಷ ನಾಯಕ್, ಜಾಹ್ನವಿ ಸಿ. ರಾವ್, ಸತೀಶ್ ರಾವ್ ಕರ್ವಾಲು, ಹರಿಶ್ಚಂದ್ರ ರಾವ್ ಹಾಗೂ ಸತೀಶ್ ಶೆಟ್ಟಿ ಯರ್ಲಪಾಡಿ ಹಾಗೂ ಮತ್ತಿತರ ಗಣ್ಯರು ಹಾಗೂ ಊರಿನ ಪ್ರಮುಖರು ಪಾಲ್ಗೊಂಡು ದೇವರ ದರ್ಶನ ಪಡೆದರು.