ಬೆಂಗಳೂರು, ಸೆಪ್ಟೆಂಬರ್ 13 : ಬೆಂಗಳೂರು ನಗರದಲ್ಲಿ ನಕಲಿ ಔಷಧ ಮಾರಾಟ ಹಾಗೂ ತಯಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಮತ್ತು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆದಿದ್ದು, ನಕಲಿ ಔಷಧಿಗಳನ್ನು ದಾಸ್ತಾನು ಮಾಡಿದ್ದ ಮಿನರ್ವ ವೃತ್ತದ 'ಹೆಲ್ತ್‌ಕೇರ್' ಮಾಲೀಕ ವಿರೇಶ್ ಜೈನ್ ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ದೊಡ್ಡ ಪ್ರಮಾಣದ ದಾಸ್ತಾನು: ಜೀವ ರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು ಹಾಗೂ ಐಸಿಯು ಇಂಜೆಕ್ಷನ್‌ಗಳನ್ನೊಳಗೊಂಡ ದೊಡ್ಡ ಪ್ರಮಾಣದ ನಕಲಿ ಔಷಧಿಗಳನ್ನು ಈತ ದಾಸ್ತಾನು ಮಾಡಿಕೊಂಡಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ.
ಆಸ್ಪತ್ರೆಗಳಿಗೆ ಪೂರೈಕೆ ಶಂಕೆ: ಜಪ್ತಿ ಮಾಡಲಾದ ನಕಲಿ ಔಷಧಗಳ ಕೆಲವು ಭಾಗಗಳನ್ನು ಬೆಂಗಳೂರಿನಾದ್ಯಂತ ಇರುವ 90ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ವಿತರಿಸಲಾಗಿದೆ ಎಂಬ ಅನುಮಾನವಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.
ಅವಧಿ ಮುಗಿದ ಮತ್ತು ಕಡಿಮೆ ಬೆಲೆಯ ಔಷಧಗಳನ್ನು ಹೊಸ ಕಂಟೈನರ್‌ಗಳಲ್ಲಿ ಮರುಪ್ಯಾಕ್ ಮಾಡಿ, ಪ್ರತಿಷ್ಠಿತ ಔಷಧ ಕಂಪನಿಗಳಂತೆಯೇ ಕಾಣುವ ನಕಲಿ ಲೇಬಲ್‌ಗಳನ್ನು ಅಂಟಿಸಲಾಗುತ್ತಿತ್ತು.
ವೈದ್ಯಕೀಯ ಪ್ರತಿನಿಧಿಗಳ ಜಾಲ: 15ಕ್ಕೂ ಹೆಚ್ಚು ವೈದ್ಯಕೀಯ ಪ್ರತಿನಿಧಿಗಳ ಜಾಲದ ಮೂಲಕ ಈ ಉತ್ಪನ್ನಗಳನ್ನು ಸುಮಾರು ಶೇ. 50ರಷ್ಟು ರಿಯಾಯಿತಿಯಲ್ಲಿ ವೈದ್ಯಕೀಯ ಸಂಸ್ಥೆಗಳಿಗೆ ಪೂರೈಸಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಆಗಸ್ಟ್ 18ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಫಾರ್ಮ್‌ನೊಂದರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ ನಕಲಿ ಔಷಧಗಳು, ಇಂಜೆಕ್ಷನ್ ತುಂಬುವ ಉಪಕರಣಗಳು ಮತ್ತು ನಕಲಿ ಲೇಬಲ್‌ಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಎಸ್‌ಐಟಿ ರಚಿಸಲಾಗಿತ್ತು.