ಮೈಸೂರು,ಸೆಪ್ಟೆಂಬರ್ 19 : ದಲಿತ ಸಂಘರ್ಷ ಸಮಿತಿಯವರು (DSS) ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಸರಿಯಾಗಿ ಓದಿಕೊಳ್ಳಲಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿ.ನರಸೀಪುರ ತಾಲೂಕಿನಲ್ಲಿ ನಡೆದ ಶೋಭಾಯಾತ್ರೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸಂಸ ಕಾರ್ಯಕರ್ತರ ವಿರುದ್ಧ ವಾಗ್ದಾಳಿ ನಡೆಸಿದರು.
"ನಿಮ್ಮ ನಡತೆ ಹೇಗಿದೆ ಎಂದರೆ, ಅಂಬೇಡ್ಕರ್ ಬಗ್ಗೆ ನಿಮಗೆ ಐದು ಪೈಸೆಷ್ಟೂ ಜ್ಞಾನವಿಲ್ಲ. ಕೇವಲ ನೀಲಿ ಶಾಲು ಹಾಕಿಕೊಂಡು ಬೇರೆ ಬೇರೆ ಉದ್ದೇಶಗಳಿಗಾಗಿ ಬರುತ್ತೀರಿ. ಅಂಬೇಡ್ಕರ್ ಅವರ ವಿಚಾರಗಳನ್ನು ಓದಿಕೊಂಡಿದ್ದರೆ ನಿಮಗೆ ವಾಸ್ತವ ಏನೆಂದು ಗೊತ್ತಾಗುತ್ತಿತ್ತು, ನಿಮ್ಮ ತಲೆಗೆ ಸ್ವಲ್ಪ ಬುದ್ಧಿಯಾದರೂ ಬರುತ್ತಿತ್ತು" ಎಂದು ಪ್ರತಾಪ್ ಸಿಂಹ ಕಿಡಿಕಾರಿದರು.
ಜಾತಿ ರಾಜಕಾರಣ ಹಾಗೂ ಪೊಲೀಸ್ ಅಧಿಕಾರಿಗಳ ವಿಚಾರವಾಗಿ ವಾಗ್ದಾಳಿ:
ಅಂಬೇಡ್ಕರ್ ಅವರು ಇಸ್ಲಾಮಿಕ್ ಬ್ರದರ್‌ಹುಡ್ (Islamic Brotherhood) ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ತಿರುಗಿಸಿ ನೋಡುವಂತೆ ಸವಾಲು ಹಾಕಿದ ಅವರು, ಮಾತೆತ್ತಿದರೆ ಜಾತಿಯನ್ನು ಮುನ್ನೆಲೆಗೆ ತರುವುದನ್ನು ಖಂಡಿಸಿದರು. "ಒಬ್ಬ ಕಳಪೆ ಅಧಿಕಾರಿಯಾದರೂ ಆತ ನಿಮ್ಮವನೆಂದು ಒಪ್ಪಿಕೊಳ್ಳುತ್ತೀರಾ? ಒಬ್ಬ ವ್ಯಕ್ತಿ ಖಾಕಿ ಸಮವಸ್ತ್ರ ಧರಿಸಿದ ಮೇಲೆ ಆತನಿಗೆ ಜಾತಿ ಇರುತ್ತದೆಯೇ? ಆತನನ್ನು ಬೆಂಬಲಿಸಿ ನೀವು ಬರುತ್ತೀರಾ?" ಎಂದು ಪ್ರಶ್ನಿಸಿದರು.
ದಲಿತ ಯುವಕ ಮಂಜು ಮೇಲೆ ಎಫ್‌ಐಆರ್ ದಾಖಲಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ಅವರು, "ಏನೇ ಅಕ್ರಮ ನಡೆದರೂ ಡಿಎಸ್‌ಎಸ್ ನವರು ತಕ್ಷಣ ಓಡಿಬಂದು ಬಿಡುತ್ತೀರಿ. ನಮ್ಮ ಯಾವುದೇ ಕಾರ್ಯಕ್ರಮ ಹಾಗೂ ಹೋರಾಟಗಳಿದ್ದರೂ ಅಲ್ಲಿಗೆ ಬಂದು ಅಡ್ಡಿಪಡಿಸುತ್ತೀರಿ. ಹಾಗಾದರೆ ನಿಮ್ಮ ಹೋರಾಟಗಳಿಗೂ ನಾವು ಬಂದು ಅಡ್ಡಿಪಡಿಸುತ್ತೇವೆಯೇ?" ಎಂದು ಆಕ್ರೋಶದಿಂದ ಪ್ರಶ್ನಿಸಿದರು.