ಬೆಂಗಳೂರು,ಸೆಪ್ಟೆಂಬರ್ 03 : ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ನಡುವಿನ ದೀರ್ಘಕಾಲಿಕ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದ್ದು, ದಂಪತಿಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ವಿಚ್ಛೇದನ (Divorce) ಮಂಜೂರು ಮಾಡಿದೆ.
ಕ್ರೌರ್ಯದ (Cruelty) ಆಧಾರದ ಮೇಲೆ ನಟ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನ ಅವರಿಗೆ ವಿಚ್ಛೇದನ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಶಾಂತಿಭೂಷಣ್ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ನ್ಯಾಯಾಲಯದ ಪ್ರಮುಖ ಆದೇಶ ಹಾಗೂ ಷರತ್ತುಗಳು:
ಜೀವನಾಂಶ (Alimony): ವಿಚ್ಛೇದನದ ಭಾಗವಾಗಿ ನಟ ದುನಿಯಾ ವಿಜಯ್ ಅವರು ತಮ್ಮ ಮೊದಲ ಪತ್ನಿ ನಾಗರತ್ನ ಅವರಿಗೆ ಒಟ್ಟು 2 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಜೀವನಾಂಶವಾಗಿ ನೀಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಜೀವನಾಂಶದ ಮೊತ್ತವನ್ನು ಮುಂದಿನ ಮೂರು ತಿಂಗಳ ಒಳಗೆ 'ಒನ್ ಟೈಮ್ ಸೆಟಲ್‌ಮೆಂಟ್' (One-Time Settlement) ರೂಪದಲ್ಲಿ ಪಾವತಿಸಬೇಕೆಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಮಕ್ಕಳ ಜವಾಬ್ದಾರಿ: ಕೇವಲ ಜೀವನಾಂಶ ಮಾತ್ರವಲ್ಲದೆ, ದಂಪತಿಯ ಮೂರು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ನಟ ದುನಿಯಾ ವಿಜಯ್ ಅವರೇ ವಹಿಸಿಕೊಳ್ಳಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ಕಟ್ಟುನಿಟ್ಟಾಗಿ ತಿಳಿಸಿದೆ.
ಕುಟುಂಬ ಕಲಹ ಹಾಗೂ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ಹಲವು ವರ್ಷಗಳಿಂದ ಕಾನೂನು ಸಮರ ನಡೆಸುತ್ತಿದ್ದ ಈ ಜೋಡಿಗೆ ಹೈಕೋರ್ಟ್ ವಿಭಾಗೀಯ ಪೀಠದ ಈ ತೀರ್ಪು ಅಂತಿಮ ನಿರ್ಣಯವಾಗಿದೆ.
ಕೋರ್ಟ್ ಆದೇಶದ ಬರನ್ನಲ್ಲೇ ದುನಿಯಾ ವಿಜಯ್ ಮೊದಲ ಪ್ರತಿಕ್ರಿಯೆ
''ಸಮಸ್ತ ಅಭಿಮಾನಿಗಳಲ್ಲಿ ಹಾಗೂ ನನ್ನ ಬದುಕಿನುದ್ದಕ್ಕೂ ಜೊತೆಯಾಗಿ ನಿಂತ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ಮನವಿ... "ನ್ಯಾಯಾಲಯದ ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ. ಕಾನೂನಿನ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ನನ್ನ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿ, ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಡಿಕೆ ಸಿಂಗ್ ಹಾಗೂ ಶಾಂತಿಭೂಷಣ್ ಅವರ ಆದೇಶಕ್ಕೆ ತಲೆಬಾಗಿದ್ದೇನೆ. ಈ ಆದೇಶಕ್ಕೆ ನನ್ನ ಗೌರವಪೂರ್ವಕ ಧನ್ಯವಾದಗಳು. ಹಾಗೆಯೇ ನನ್ನ ವಕೀಲರಾದ ಹಿರಿಯ ಕೌನ್ಸಿಲ್ ಶ್ರೀವತ್ಸ ಹಾಗೂ ಯುಕ್ತ ಅನಿಲ್ ಅವರಿಗೆ ನನ್ನ ಹೃತ್ತೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ!" ಎಂದು ದುನಿಯಾ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ.
''ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಲಿ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಹೆಣ್ಣುಮಕ್ಕಳು ವಯಸ್ಕರಾಗಿದ್ದು, ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಗಳಿಸಿದ್ದಾರೆ. ಅವರಿಗೆ ಯಾವುದೇ ಮುಜುಗರವಾಗಬಾರದು. ಮಕ್ಕಳ ಭವಿಷ್ಯ ಹಾಗೂ ಹಿತದೃಷ್ಟಿಯಿಂದ ನನ್ನ ವೈಯಕ್ತಿಕ ಸಾಂಸಾರಿಕ ವಿಚಾರಕ್ಕೆ ನ್ಯಾಯಾಲಯ ನೀಡಿದ ಆದೇಶವನ್ನು ಆತ್ಮಸಾಕ್ಷಿಯಿ೦ದ ಸ್ವೀಕರಿಸಿದ್ದು, ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ಹೀಗೆಯೇ ಇರಲಿ. ಧನ್ಯವಾದಗಳು'' ಎಂದು ದುನಿಯಾ ವಿಜಯ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.