BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

BMS ಬಿಎಂಎಸ್ ಹೋರಾಟಕ್ಕೆ ಫಲಶ್ರುತಿ: ಕಾರ್ಮಿಕ ಸಂಹಿತೆ ತಿದ್ದುಪಡಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸಚಿವರ ಭರವಸೆ


ಮಂಗಳೂರು, ಸೆಪ್ಟೆಂಬರ್ 03 : ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ನಡೆಸಿದ ನಿರಂತರ ಹೋರಾಟ ಹಾಗೂ ಒತ್ತಡಕ್ಕೆ ಮಣಿದಿರುವ  ಕೇಂದ್ರ ಸರ್ಕಾರವು, ಕಾರ್ಮಿಕ ಸಂಹಿತೆಗಳಲ್ಲಿ (Labour Codes) ಅಗತ್ಯ ತಿದ್ದುಪಡಿಗಳನ್ನು ತರಲು ಮತ್ತು ಕಾರ್ಮಿಕರ ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸಕಾರಾತ್ಮಕ ಸ್ಪಂದನೆ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರದ ಸಂಬಂಧಿತ ಸಚಿವರು ಬಿಎಂಎಸ್ ಮುಖಂಡರಿಗೆ ಅಧಿಕೃತ ಭರವಸೆ ನೀಡಿದ್ದಾರೆ.

ದೇಶದ ಕಾರ್ಮಿಕ ವರ್ಗದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಎಂಎಸ್ ವಿವಿಧ ಹಂತಗಳಲ್ಲಿ ಪ್ರತಿಭಟನೆ ಹಾಗೂ ಹೋರಾಟಗಳನ್ನು ಹಮ್ಮಿಕೊಂಡಿತ್ತು. ಕಾರ್ಮಿಕರ ಈ ಸಂಘಟಿತ ಹೋರಾಟದ ಫಲವಾಗಿ ಇದೀಗ ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಹತ್ವದ ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೂ ಮುನ್ನ ಕಾರ್ಮಿಕರ ಪರವಾಗಿ ಕೆಲವು ಸೂಕ್ತ ತಿದ್ದುಪಡಿಗಳನ್ನು ತರುವುದಾಗಿ ಭರವಸೆ ದೊರೆತಿರುವುದು ಕಾರ್ಮಿಕ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.

ಕಾರ್ಮಿಕರ ಹಕ್ಕುಗಳು ಹಾಗೂ ಸಾಮಾಜಿಕ ಭದ್ರತೆಗಾಗಿ ಭಾರತೀಯ ಮಜ್ದೂರು ಸಂಘ (BMS) ವತಿಯಿಂದ ಆಗಸ್ಟ್ 17ರಂದು ದೇಶಾದ್ಯಂತ ನಡೆಸಿದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮಹತ್ವದ ಫಲಶ್ರುತಿ ದೊರೆತಿದೆ ಎಂದು BMS ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.

ಆಗಸ್ಟ್ 17ರ ಪ್ರತಿಭಟನೆಯ ಸಂದರ್ಭದಲ್ಲಿ ಸಲ್ಲಿಸಲಾದ ಮನವಿಯ ಮುಂದುವರಿದ ಭಾಗವಾಗಿ, ಸೆ.1ರಂದು BMS ಅಖಿಲ ಭಾರತ ನಾಯಕತ್ವದ ನಿಯೋಗವು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರನ್ನು ಭೇಟಿ ಮಾಡಿ ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಹಾಗೂ ವಿವಿಧ ಪ್ರಮುಖ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಮಾತುಕತೆ ನಡೆಸಿತು.

BMS ಅಖಿಲ ಭಾರತ ಅಧ್ಯಕ್ಷ ಎಸ್. ಮಲ್ಲೇಶಂ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಪಾಂಡೆ, ಸಂಘಟನಾ ಕಾರ್ಯದರ್ಶಿ ಬಿ. ಸುರೇಂದ್ರನ್, ಮಾಜಿ ಅಖಿಲ ಭಾರತ ಅಧ್ಯಕ್ಷರಾದ ಹಿರಣ್ಯ ಪಾಂಡ್ಯ ಹಾಗೂ ಸಂಜಿ ನಾರಾಯಣ್ ನಿಯೋಗದಲ್ಲಿದ್ದರು.

ಸಭೆಯಲ್ಲಿ EPF, ESI ಹಾಗೂ ಬೋನಸ್ ವೇತನ ಮಿತಿಗಳ ಹೆಚ್ಚಳ, 300 ಕಾರ್ಮಿಕರ ಮಿತಿಯನ್ನು 100ಕ್ಕೆ ಇಳಿಸುವುದು, Fixed Term Employmentಗೆ ನಿಯಂತ್ರಣ, ಉದ್ಯೋಗ ಭದ್ರತೆ, ಕಾರ್ಮಿಕ ಸಂಘಗಳ ಮಾನ್ಯತೆ ಮತ್ತು ನೋಂದಣಿಯಲ್ಲಿ ಸುಧಾರಣೆ, ‘Worker’ ವ್ಯಾಖ್ಯಾನದಲ್ಲಿ ತಿದ್ದುಪಡಿ ಹಾಗೂ ಮುಷ್ಕರದ ಹಕ್ಕಿಗೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಯಿತು.

ಕಾರ್ಮಿಕ ಸಂಹಿತೆಗಳ ತಿದ್ದುಪಡಿ ಸೇರಿದಂತೆ BMS ಮುಂದಿಟ್ಟ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ, ಅಗತ್ಯ ಸುಧಾರಣೆಗಳು ಹಾಗೂ ಕಾನೂನು ತಿದ್ದುಪಡಿಗಳನ್ನು ಶೀಘ್ರದಲ್ಲೇ ಪರಿಗಣಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.

ಮುಂದಿನ ಹಂತದಲ್ಲಿ Occupational Safety, Health and Working Conditions Code ಕುರಿತು BMS ಕೇಂದ್ರ ನಾಯಕತ್ವ ಮತ್ತು ಕೇಂದ್ರ ಕಾರ್ಮಿಕ ಸಚಿವರ ನಡುವೆ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಯಲಿದೆ.

“ಆಗಸ್ಟ್ 17ರ ರಾಷ್ಟ್ರವ್ಯಾಪಿ ಹೋರಾಟವು ಕಾರ್ಮಿಕರ ಧ್ವನಿಯನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿಯಾಗಿ ತಲುಪಿಸಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ದೊರೆತಿರುವ ಭರವಸೆ ನಮ್ಮ ಸಂಘಟಿತ ಹೋರಾಟದ ಫಲಶ್ರುತಿ. ಕಾರ್ಮಿಕರ ಹಿತಾಸಕ್ತಿಗಾಗಿ BMS ಹೋರಾಟ ನಿರಂತರವಾಗಿ ಮುಂದುವರಿಯಲಿದೆ,” ಎಂದು ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!