ಬೆಂಗಳೂರು, ಸೆಪ್ಟೆಂಬರ್ 06 : ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ವಕೀಲರೊಬ್ಬರಿಗೆ ಕರ್ನಾಟಕ ಹೈಕೋರ್ಟ್ ಅತ್ಯಂತ ವಿಶಿಷ್ಟ ಹಾಗೂ ಮಾದರಿ ಶಿಕ್ಷೆಯೊಂದನ್ನು ವಿಧಿಸಿದೆ. ಜೈಲು ಶಿಕ್ಷೆ ಅಥವಾ ಕಠಿಣ ಕ್ರಮದ ಬದಲು ಬರೋಬ್ಬರಿ 1 ಸಾವಿರ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ಹೈಕೋರ್ಟ್ ಆದೇಶಿಸಿದೆ!
ಕೊಪ್ಪಳ ಜಿಲ್ಲೆಯ ಗಂಗಾವತಿಯ ಸೆಷನ್ಸ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸಿದ್ದ ವಕೀಲ ಎಸ್.ರಂಗಸ್ವಾಮಿ ಸಲ್ಲಿಸಿದ್ದ ಬೇಷರತ್ ಕ್ಷಮಾಪಣಾ ಅರ್ಜಿಯನ್ನು ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಕೀಲರ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಹಾಗೂ ಕ್ರಿಮಿನಲ್ ಮೊಕದ್ದಮೆ ಪ್ರಕ್ರಿಯೆಯನ್ನು ಹೈಕೋರ್ಟ್ ಹಿಂಪಡೆದಿದೆ.
ಆದರೆ, ನ್ಯಾಯಾಧೀಶರು ಯಾವುದೇ ಭಯ ಅಥವಾ ಒತ್ತಡವಿಲ್ಲದೆ ಮುಕ್ತವಾಗಿ ಕಾರ್ಯನಿರ್ವಹಿಸಲು ಪೂರಕ ವಾತಾವರಣ ಕಲ್ಪಿಸುವುದು ಅತ್ಯವಶ್ಯಕ ಎಂದು ಹೈಕೋರ್ಟ್ ಕಟುಸತ್ಯವನ್ನು ನೆನಪಿಸಿದೆ. ಭವಿಷ್ಯದಲ್ಲಿ ನಡವಳಿಕೆಯನ್ನು ತಿದ್ದಿಕೊಳ್ಳುವ ಭರವಸೆಯ ಮೇರೆಗೆ ಈ ವಿನಾಯಿತಿ ನೀಡಲಾಗಿದ್ದು, ವಕೀಲರ ತಪ್ಪಿನ ಗಂಭೀರ ಅಂಶಗಳು ಆದೇಶದಲ್ಲಿ ಹಾಗೆಯೇ ಉಳಿಯಲಿವೆ ಎಂದು ಪೀಠ ಸ್ಪಷ್ಟಪಡಿಸಿದೆ. ಜೊತೆಗೆ, ಪ್ರಕರಣ ವರ್ಗಾವಣೆ ಕೋರಿದ್ದ ಅರ್ಜಿದಾರರಿಗೆ ವಿಧಿಸಲಾಗಿದ್ದ ಒಂದು ಲಕ್ಷ ರೂಪಾಯಿ ದಂಡವನ್ನು ಕೋರ್ಟ್ ಯಥಾವತ್ತಾಗಿ ಮುಂದುವರಿಸಿದೆ.