BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Belthangady Theft ಬೆಳ್ತಂಗಡಿ: ಗೃಹಪ್ರವೇಶಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿ 15.82 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ನಗದು ಕಳವು


ಬೆಳ್ತಂಗಡಿ,ಸೆಪ್ಟೆಂಬರ್ 16 : ಮನೆಯವರು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದ ಹಾಗೂ ಮನೆಯಲ್ಲಿ ವೈರಿಂಗ್ ಕೆಲಸ ನಡೆಯುತ್ತಿದ್ದ ಸಮಯವನ್ನು ದುರ್ಬಳಕೆ ಮಾಡಿಕೊಂಡ ಕಳ್ಳರು, ಒಟ್ಟು 15.82 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ನಡೆದಿದೆ.

ಆಲಂದಿಲ ನಿವಾಸಿ ನೌಫಾಲ್ ಬಿ.ಎಂ. (34) ಎಂಬವರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯ ವಿವರ:

ಸೆಪ್ಟೆಂಬರ್ 13ರ ಮಧ್ಯಾಹ್ನ ನೌಫಾಲ್ ಅವರು ತಮ್ಮ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಕಳುಹಿಸಿ, ತಾವು ಮನೆಗೆ ಬೀಗ ಹಾಕಿ ತರಕಾರಿ ವ್ಯಾಪಾರಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು. ಸೆ. 14ರಂದು ಮನೆಯಲ್ಲಿ ವೈರಿಂಗ್ ಕೆಲಸಕ್ಕಾಗಿ ಕಾರ್ಮಿಕರನ್ನು ಕರೆಸಲಾಗಿತ್ತು. ಮದ್ದಡ್ಕದ ಫಾರೂಕ್ ಎಂಬವರು ಕುದ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ಅವರನ್ನು ಕೆಲಸಕ್ಕೆ ಕರೆತಂದಿದ್ದರು. ಆ ಸಂದರ್ಭದಲ್ಲಿ ನೌಫಾಲ್ ಅವರ ತಮ್ಮ ಮಹಮ್ಮದ್ ನೌಷಾದ್ ಕೂಡ ಮನೆಯಲ್ಲಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅದೇ ದಿನ ರಾತ್ರಿ 8.30ರ ಸುಮಾರಿಗೆ ನೌಫಾಲ್ ಕುಟುಂಬದೊಂದಿಗೆ ವಾಪಸ್ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಬೆಡ್‌ರೂಂನ ಗೋಡ್ರೇಜ್‌ನಲ್ಲಿದ್ದ ಚಿನ್ನದ ಬಾಕ್ಸ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಪರಿಶೀಲನೆ ನಡೆಸಿದಾಗ, 32 ಗ್ರಾಂ ಮತ್ತು 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಚಿನ್ನದ ಸರ, ಕಾಲುಚೈನು, ಬ್ರಾಸ್‌ಲೈಟ್ ಸೇರಿದಂತೆ ಒಟ್ಟು 113 ಗ್ರಾಂ ತೂಕದ (ಅಂದಾಜು 15.82 ಲಕ್ಷ ರೂ. ಮೌಲ್ಯದ) ಚಿನ್ನಾಭರಣ ಮತ್ತು 1.80 ಲಕ್ಷ ರೂ. ನಗದು ಕಳವಾಗಿರುವುದು ಗೊತ್ತಾಗಿದೆ. ಇದರೊಂದಿಗೆ ನೌಫಾಲ್ ಅವರ ತಾಯಿಯ ಗೋಡ್ರೇಜ್‌ನಲ್ಲಿದ್ದ 7 ಗ್ರಾಂ ತೂಕದ ಮೂರು ಉಂಗುರಗಳು ಸಹ ಕಳ್ಳತನವಾಗಿವೆ.

ಗೋಡ್ರೇಜ್‌ನ ಕೀಯನ್ನು ಅದರಲ್ಲೇ ಇಡಲಾಗಿದ್ದು, ಮನೆಯವರು ಹೊರಗಿದ್ದ ಸಮಯವನ್ನು ನೋಡಿಕೊಂಡು ಬಂದ ದುಷ್ಕರ್ಮಿಗಳು  ಕಳ್ಳತನ ಎಸೆಗಿದ್ದಾರೆ. ವೈರಿಂಗ್ ಕೆಲಸಕ್ಕೆ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆ ಅನುಮಾನವಿರುವುದಾಗಿ ದೂರಿನಲ್ಲಿ ವ್ಯಕ್ತಪಡಿಸಲಾಗಿದೆ.

ಈ ಸಂಬಂಧ ಸೆಪ್ಟೆಂಬರ್ 15ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್-2023ರ ಕಲಂ 331(3), 331(4), 305ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!