ಬಂಟ್ವಾಳ, ಸೆಪ್ಟೆಂಬರ್ 02 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಯತೀಶ್ ಎ. ಅವರ ವಿರುದ್ಧ ವಿಟ್ಲ ಪೊಲೀಸ್ ಠಾಣಾಧಿಕಾರಿ ಸಲ್ಲಿಸಿದ್ದ ಗಡಿಪಾರು ಪ್ರಸ್ತಾವನೆಯನ್ನು ಜಿಲ್ಲಾ ಪೊಲೀಸ್ ಆಡಳಿತ ರದ್ದುಗೊಳಿಸಿದೆ. ಯತೀಶ್ ಅವರ ಉತ್ತಮ ನಡವಳಿಕೆಯನ್ನು ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಯತೀಶ್ ಪೆರುವಾಯಿ ಅವರನ್ನು ಜಿಲ್ಲೆಯಿಂದ ಹೊರಹಾಕಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಸಂಬಂಧ ಜುಲೈ 15ರಂದು ವಿಚಾರಣೆ ನಿಗದಿಯಾಗಿತ್ತು. ವಿಶೇಷವೆಂದರೆ, ಯತೀಶ್ ಪೆರುವಾಯಿ ಯಾವುದೇ ವಕೀಲರ ಸಹಾಯವಿಲ್ಲದೆ (Party-in-Person) ಸ್ವತಃ ತಾವೇ ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಲು ಅನುಮತಿ ಪಡೆದಿದ್ದರು.
ವಿಚಾರಣೆ ವೇಳೆ, ಯತೀಶ್ ಅವರು ಕಳೆದ ಒಂದು ವರ್ಷದಿಂದ ಯಾವುದೇ ಕಾನೂನುಬಾಹಿರ ಅಥವಾ ಸಮಾಜಘಾತಕ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿದೆ. ಅವರ ಉತ್ತಮ ನಡವಳಿಕೆಯನ್ನು ಗಣನೆಗೆ ತೆಗೆದುಕೊಂಡ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಅವರು, ಪ್ರಸ್ತುತ ಹಂತದಲ್ಲಿ ಗಡಿಪಾರು ಪ್ರಕ್ರಿಯೆಯನ್ನು ಕೈಬಿಟ್ಟು ಆಗಸ್ಟ್ 26ರಂದು ತೆರೆದ ನ್ಯಾಯಾಲಯದಲ್ಲಿ ಆದೇಶ ಪ್ರಕಟಿಸಿದ್ದಾರೆ.
ಮುಂದಿನ ದಿನಗಳಲ್ಲಿಯೂ ಅವರು ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದರೆ ಹೊಸದಾಗಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸ್ವಾತಂತ್ರ್ಯವಿದೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.