ಬಂಟ್ವಾಳ, ಸೆ 23 : ಕೊಳತ್ತಮಜಲು ಅಬ್ದುಲ್ ರಹಮಾನ್ ಕೊಲೆ ಪ್ರಕರಣದ ಆರೋಪಿಗಳಾದ ಭರತ್ ಕುಮ್ಡೇಲು ಸೇರಿದಂತೆ 6 ಜನರ ವಿರುದ್ಧ ಪೊಲೀಸರು ಗೂಂಡಾ ಕಾಯ್ದೆ ಜಾರಿಗೊಳಿಸಿರುವುದನ್ನು ಖಂಡಿಸಿ, ಸೆಪ್ಟೆಂಬರ್ 28ರಂದು ಬಿಸಿರೋಡಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪ್ರಮುಖರು ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ಮುಖಂಡ ಪ್ರಸಾದ್ ಕುಮಾರ್ ರೈ ಮಾತನಾಡಿ, ಮೈಸೂರಿನ ವಿಶೇಷ ನ್ಯಾಯಾಲಯದಿಂದ ಆರೋಪಿಗಳಿಗೆ ಜಾಮೀನು ಮಂಜೂರಾದ ಬೆನ್ನಲ್ಲೇ, ಜೈಲಿನಿಂದ ಬಿಡುಗಡೆಯಾಗದಂತೆ ಗೂಂಡಾ ಕಾಯ್ದೆ ಹೇರಿರುವುದು ಸರ್ಕಾರದ ದಮನ ನೀತಿಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ನಡೆಯುವ ಈ ಹೋರಾಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಘಟನೆಯ ಹಿನ್ನೆಲೆ:
2025ರ ಮೇ 27ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು. ತನಿಖೆಯ ಬಳಿಕ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿರುವವರನ್ನು ಗುರಿಯಾಗಿಸಿ ಒಟ್ಟು 9 ಜನರ ಹೆಸರುಗಳನ್ನು ಸೇರಿಸಿ 'ಕೊಕಾ' ಕಾಯ್ದೆಯಡಿ ಅಂತಿಮ ವರದಿ ಸಲ್ಲಿಸಲಾಗಿತ್ತು. ಇದರಿಂದಾಗಿ ಪ್ರಕರಣವು ಮಂಗಳೂರು ನ್ಯಾಯಾಲಯದಿಂದ ಮೈಸೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಬಳಿಕ ಕಾನೂನು ಹೋರಾಟ ನಡೆದು, ಮೈಸೂರು ವಿಶೇಷ ನ್ಯಾಯಾಲಯವು 2026ರ ಸೆಪ್ಟೆಂಬರ್ 15ರಂದು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಜಾಮೀನು ಸಿಕ್ಕರೂ ಬಿಡುಗಡೆಯಾಗದಂತೆ ತಂತ್ರ:
ತೆರೆದ ನ್ಯಾಯಾಲಯದಲ್ಲಿ ಜಾಮೀನು ಆದೇಶ ಘೋಷಣೆಯಾಗಿ, ಆರೋಪಿಗಳು ಬಿಡುಗಡೆಯಾಗಬೇಕಿದ್ದ ನಿರ್ಣಾಯಕ ಹಂತದಲ್ಲಿ ಬಳ್ಳಾರಿ ಮತ್ತು ಕಲಬುರಗಿ ಕಾರಾಗೃಹಗಳಲ್ಲಿ ಬಂಧನದಲ್ಲಿರುವ ಭರತ್ ಕುಮ್ಮೇಲು, ಅಭಿನ್ ರೈ, ತೇಜಾಕ್ಷ, ಶಿವಪ್ರಸಾದ್ ತುಂಬೆ, ಪ್ರದೀಪ್ ಹಾಗೂ ರಂಜಿತ್ ವಿರುದ್ಧ ಜಿಲ್ಲಾಧಿಕಾರಿಗಳ ಆದೇಶ ಪಡೆದು 'ಗೂಂಡಾ ಕಾಯ್ದೆ'ಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭುಜಂಗ ಕುಲಾಲ್, ಲೋಹಿತ್ ಪಣೋಲಿಬೈಲ್, ಸಂತೋಷ್ ಸರಪಾಡಿ ಮತ್ತು ಸಚಿನ್ ಮೇಲ್ಯಾರ್ ಉಪಸ್ಥಿತರಿದ್ದರು.
ಶರಣ್ ಪಂಪ್ವೆಲ್ ಮನವಿ
ಸತ್ಯಕ್ಕೆ ನ್ಯಾಯಾಲಯದಲ್ಲೂ ಜಯ ಸಿಕ್ಕರೂ ಸರ್ಕಾರದ ದಮನಕಾರಿ ನೀತಿ ಕೊನೆಯಾಗಿಲ್ಲ. ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ತುಳುನಾಡಿನ ಪ್ರತಿಯೊಬ್ಬ ಹಿಂದೂವೂ ಜಾಗೃತನಾಗಬೇಕಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ನಿರಂತರವಾಗಿ ಜೈಲಿನಲ್ಲಿಯೇ ಕೊಳೆಯುವಂತೆ ಮಾಡುವ ವ್ಯವಸ್ಥಿತ ಹುನ್ನಾರ ಇದಾಗಿದ್ದು, ಸರ್ಕಾರದ ಈ ದಮನಕಾರಿ ಹಾಗೂ ರಾಜಕೀಯ ಪ್ರೇರಿತ ನೀತಿಯನ್ನು ಖಂಡಿಸಿ ಸೆಪ್ಟೆಂಬರ್ 28 ರಂದು ಬಿ.ಸಿ. ರೋಡ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಈ ಬೃಹತ್ ಪ್ರತಿಭಟನೆಯಲ್ಲಿ ಸಮಸ್ತ ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಮನವಿ ಮಾಡಿದ್ದಾರೆ.