ಮೂಡುಬಿದಿರೆ,ಸೆಪ್ಟೆಂಬರ್ 01 : ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿದ್ಯಾರ್ಥಿನಿ, ಹಾವೇರಿ ಜಿಲ್ಲೆಯ ಹಟ್ಟಿಮತ್ತೂರು ಗ್ರಾಮದ ರೈತನ ಮಗಳು ಸೃಷ್ಟಿ ಮಂಜುನಾಥ ಉಳ್ಳಾಗಡ್ಡಿ ಅವರು ಜಾಗತಿಕ ಪಾವತಿ ತಂತ್ರಜ್ಞಾನ ಸಂಸ್ಥೆ ‘ವೀಸಾ’ದಲ್ಲಿ (Visa) ಸಾಫ್ಟ್ವೇರ್ ಎಂಜಿನಿಯರ್ ಆಗಿ ಆಯ್ಕೆಯಾಗಿದ್ದಾರೆ. ವಾರ್ಷಿಕ 46.33 ಲಕ್ಷ ರೂ.ಗಳ ಬೃಹತ್ ಉದ್ಯೋಗ ಪ್ಯಾಕೇಜ್ ಪಡೆಯುವ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಇಂಟರ್ನ್ಶಿಪ್‌ನಿಂದ ಹಿಡಿದು ಹುದ್ದೆಯವರೆಗೆ:
ಆಳ್ವಾಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯ ವೃದ್ಧಿಗೆ ನೀಡುವ ಗುಣಮಟ್ಟದ ಇಂಟರ್ನ್ಶಿಪ್‌ಗೆ ವಿಶೇಷ ಆದ್ಯತೆ ಇದ್ದು, ಇದರ ಭಾಗವಾಗಿ ಸೃಷ್ಟಿ ಅವರು ಆರನೇ ಸೆಮಿಸ್ಟರ್‌ನಲ್ಲಿ ‘ವೀಸಾ’ ಸಂಸ್ಥೆಯಲ್ಲಿ ಇಂಟರ್ನ್ಶಿಪ್ ಮಾಡಲು ಅವಕಾಶ ಪಡೆದಿದ್ದರು. 10 ವಾರಗಳ ಈ ಇಂಟರ್ನ್ಶಿಪ್ ಅವಧಿಯಲ್ಲಿ ಮಾಸಿಕ 90,000 ರೂ. ಸ್ಟೈಪೆಂಡ್‌ನೊಂದಿಗೆ ಕಾರ್ಯನಿರ್ವಹಿಸಿ ತಮ್ಮ ತಾಂತ್ರಿಕ ಜ್ಞಾನ ಹಾಗೂ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದರು. ಅವರ ಈ ಸಾಧನೆಗೆ ಮೆಚ್ಚಿದ ಸಂಸ್ಥೆಯು, ಬಳಿಕ ಅವರನ್ನು ಸಾಫ್ಟ್ವೇರ್ ಇಂಜಿನಿಯರ್ ಹುದ್ದೆಗೆ ಪೂರ್ಣಾವಧಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಂಡಿದೆ.
ವೀಸಾ ಸಂಸ್ಥೆಯ ಈ ಉದ್ಯೋಗ ಕೊಡುಗೆಯಲ್ಲಿ ವೇತನದ ಜತೆಗೆ ಕುಟುಂಬಕ್ಕೆ 7.50 ಲಕ್ಷ ರೂ. ಮೌಲ್ಯದ ವೈದ್ಯಕೀಯ ವಿಮೆ, 25,000 ರೂ. ಮೊತ್ತದ ಹೊರರೋಗಿ ಚಿಕಿತ್ಸಾ ಸೌಲಭ್ಯ ಹಾಗೂ ಗರಿಷ್ಠ 3 ಲಕ್ಷ ರೂ. ವರೆಗೆ ಶಿಕ್ಷಣ ಸಹಾಯಧನ ದೊರೆಯಲಿದೆ. ಇದರೊಂದಿಗೆ ಜಿಮ್ ಸೌಲಭ್ಯ, ಕಚೇರಿ ಸಾರಿಗೆ ಹಾಗೂ ವಾರ್ಷಿಕ ಆರೋಗ್ಯ ತಪಾಸಣೆಯಂತಹ ಹೆಚ್ಚುವರಿ ಸೌಲಭ್ಯಗಳೂ ಲಭ್ಯವಿರಲಿವೆ.
ಗ್ರಾಮೀಣ ಹಿನ್ನೆಲೆಯ ರೈತ ಕುಟುಂಬದಿಂದ ಬಂದ ಸೃಷ್ಟಿ ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಈ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸೂಕ್ತ ಪ್ರಾಯೋಗಿಕ ಅನುಭವ ಸಿಕ್ಕರೆ ಜಾಗತಿಕ ಮಟ್ಟದಲ್ಲಿ ಅವಕಾಶಗಳು ಸಿಗುತ್ತವೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಪ್ರಶಂಸಿಸಿದ್ದಾರೆ.
