BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

World Elephant day ವಿಶ್ವ ಆನೆ ದಿನ: ವಂತಾರಾದಿಂದ ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕಾಗಿ ದೇಶ-ವಿದೇಶಗಳಲ್ಲಿ ಸೇವಾ ವಿಸ್ತರಣೆ


ಜಾಮ್‌ನಗರ, ಆಗಸ್ಟ್ 13: ವಿಶ್ವ ಆನೆ ದಿನದ ಸಂದರ್ಭದಲ್ಲಿ ಅನಂತ್ ಅಂಬಾನಿ ಅವರು ಪ್ರಾರಂಭಿಸಿದ 'ವಂತಾರಾ' (Vantara) ಸಂಸ್ಥೆಯು ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ವಿವಿಧ ನೂತನ ಉಪಕ್ರಮಗಳನ್ನು ಹಂಚಿಕೊಂಡಿದ್ದಾರೆ. ಆನೆಗಳ ಆರೈಕೆ, ಮಾವತರಿಗೆ ತರಬೇತಿ, ಸಂರಕ್ಷಣೆಗೆ ಸಂಬಂಧಿಸಿದ ಜ್ಞಾನ ವಿನಿಮಯ ಮತ್ತು ಮಾನವ-ಆನೆ ಸಂಘರ್ಷವನ್ನು ತಗ್ಗಿಸುವ ನಿಟ್ಟಿನಲ್ಲಿ ವಂತಾರಾ ಭಾರತದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾರ್ಯನಿರ್ವಹಿಸುತ್ತಿದೆ.

ವಂತಾರಾದಲ್ಲಿ ಪ್ರಸ್ತುತ 260ಕ್ಕೂ ಹೆಚ್ಚು ಏಷ್ಯನ್ ಆನೆಗಳಿಗೆ ವಿಶೇಷ ಆರೈಕೆ ನೀಡಲಾಗುತ್ತಿದೆ. 'ಗೌರಿ' ಎಂಬ ಆನೆಯ ರಕ್ಷಣೆಯೊಂದಿಗೆ ಈ ಪಯಣ ಪ್ರಾರಂಭವಾಗಿತ್ತು. ಇದು ಅನಂತ್ ಅಂಬಾನಿ ಅವರು ಮೊದಲು ರಕ್ಷಿಸಿದ ಆನೆಯಾಗಿದೆ. ತದನಂತರ ಆನೆಗಳ ವಿಶೇಷ ಆರೈಕೆ ಮತ್ತು ಗೌರವಯುತ ಬದುಕನ್ನು ಖಾತರಿಪಡಿಸುವ ದೃಷ್ಟಿಯಿಂದ ಈ ಹೆಜ್ಜೆಯನ್ನು ನಿರಂತರವಾಗಿ ಮುಂದುವರೆಸಲಾಗಿದೆ.

ಈ ಕುರಿತು ಮಾತನಾಡಿರುವ ಅನಂತ್ ಅಂಬಾನಿ, "ಆನೆಗಳು ನನ್ನ ಹೃದಯದಲ್ಲಿ ಮತ್ತು ವಂತಾರಾದ ಪಯಣದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿವೆ. ಪ್ರತಿಯೊಂದು ಆನೆಗೂ ತನ್ನದೇ ಆದ ಕಥೆಯಿದೆ, ಮತ್ತು ಪ್ರತಿ ರಕ್ಷಣೆಯೂ ಅವುಗಳ ಆರೈಕೆಯ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ಗೌರಿಯ ರಕ್ಷಣೆಯಿಂದ ಪ್ರಾರಂಭವಾದ ಈ ಪಯಣ ಈಗ ಆನೆಗಳ ಕಲ್ಯಾಣ, ಅವುಗಳ ಆರೈಕೆ ಮಾಡುವವರಿಗೆ ಬೆಂಬಲ, ಜ್ಞಾನ ಹಂಚಿಕೆ ಮತ್ತು ಭಾರತ ಹಾಗೂ ವಿಶ್ವಾದ್ಯಂತ ಸಂರಕ್ಷಣೆಯ ಪ್ರಯತ್ನಗಳವರೆಗೆ ತಲುಪಿದೆ. ವಿಶ್ವ ಆನೆ ದಿನದಂದು ಈ ಅದ್ಭುತ ಜೀವಿಗಳ ಗೌರವಯುತ ಹಾಗೂ ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತೇವೆ" ಎಂದು ತಿಳಿಸಿದ್ದಾರೆ.

ಜೈಪುರ ಹತ್ತಿ ಗಾವ್‌ (ಆನೆ ಹಳ್ಳಿ) ನಲ್ಲಿ ವಿಶೇಷ ಸೌಲಭ್ಯಗಳು

ರಾಜಸ್ಥಾನ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವ ಸಂಜಯ್ ಶರ್ಮಾ ಅವರು ವಿಶ್ವ ಆನೆ ದಿನದ ಸಂದರ್ಭದಲ್ಲಿ ಜೈಪುರ ಹತ್ತಿ ಗಾವ್‌ ನಲ್ಲಿ ಆನೆಗಳ ಆರೈಕೆ ಮತ್ತು ಜೀವನಮಟ್ಟವನ್ನು ಸುಧಾರಿಸಲು ವಂತಾರಾದ ಸಹಯೋಗವನ್ನು ಘೋಷಿಸಿದ್ದಾರೆ. ಇದರಡಿ ಅತ್ಯಾಧುನಿಕ ಆನೆ ಚಿಕಿತ್ಸೆ ಮತ್ತು ಆರೈಕೆ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಲ್ಲಿ ಸುಧಾರಿತ ಆಸ್ಪತ್ರೆ, ಪೋಷಣಾ ಕೇಂದ್ರ (Nutrition Center) ಮತ್ತು ಹೈಡ್ರೋಥೆರಪಿ ಸೌಲಭ್ಯಗಳು ಸೇರಿವೆ. ವೃದ್ಧ ಆನೆಗಳಿಗಾಗಿ ಪ್ರತ್ಯೇಕ ನಿವೃತ್ತಿ ಮತ್ತು ಆರೈಕೆ ಕೇಂದ್ರವನ್ನು ಸಹ ನಿರ್ಮಿಸಲಾಗುವುದು.

ದೇಶದ ನಾಲ್ಕು ರಾಜ್ಯಗಳಲ್ಲಿ ಆನೆ ಕಲ್ಯಾಣ ಕಾರ್ಯಕ್ರಮ

ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳ ರಾಜ್ಯ ಅರಣ್ಯ ಇಲಾಖೆಗಳೊಂದಿಗೆ ಕೈಜೋಡಿಸಿ ವಂತಾರಾ ಆನೆ ಕಲ್ಯಾಣ ವಿಸ್ತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರ ಅಡಿಯಲ್ಲಿ 182 ಆನೆಗಳು ಮತ್ತು 242 ಮಾವತರಿಗೆ ಆನೆಗಳ ಆರೋಗ್ಯ, ಮಾನವೀಯ ರೀತಿಯಲ್ಲಿ ಆರೈಕೆ, ಪ್ರಥಮ ಚಿಕಿತ್ಸೆ ಹಾಗೂ ಅತ್ಯುತ್ತಮ ನಿರ್ವಹಣೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗಿದೆ. ಜೊತೆಗೆ ಪಶುವೈದ್ಯಕೀಯ ಮತ್ತು ಕಲ್ಯಾಣ ಕಿಟ್‌ಗಳೊಂದಿಗೆ ಪೌಷ್ಟಿಕಾಂಶದ ಬೆಂಬಲವನ್ನೂ ಒದಗಿಸಲಾಗಿದೆ.

ಮಕ್ಕಳಲ್ಲಿ ಆನೆಗಳ ಬಗ್ಗೆ ಸಂವೇದನೆ ಹೆಚ್ಚಿಸಲು 'ಮೈ ಫ್ರೆಂಡ್ ಲೀಲಾವತಿ' ಅಭಿಯಾನ

ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ದಯೆ, ಕರುಣೆ ಮತ್ತು ಸೌಹಾರ್ದತೆಯ ಸಂದೇಶವನ್ನು ಬಿತ್ತುವ ಸಲುವಾಗಿ ವಂತಾರಾ ವತಿಯಿಂದ 'ಮೈ ಫ್ರೆಂಡ್ ಲೀಲಾವತಿ' ಎಂಬ ಸಾಮಾಜಿಕ ಜಾಲತಾಣ ಅಭಿಯಾನವನ್ನು ಆರಂಭಿಸಲಾಗಿದೆ. 'ಲೀಲಾವತಿ' ಎಂಬ ಹೆಣ್ಣಾನೆಯ ಸ್ಪೂರ್ತಿದಾಯಕ ಕಥೆಯ ಮೂಲಕ ಮಕ್ಕಳಲ್ಲಿ ಪ್ರಾಣಿಪ್ರೇಮವನ್ನು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಮಾನವ-ಆನೆ ಸಂಘರ್ಷ ತಗ್ಗಿಸಲು ಜಾಗತಿಕ ಸಹಕಾರ

ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡಲು ವಂತಾರಾ ವತಿಯಿಂದ ಎಲಿಫೆಂಟ್ ಪ್ರೊಟೆಕ್ಷನ್ ಇನಿಷಿಯೇಟಿವ್ (EPI) ಫೌಂಡೇಶನ್‌ಗೆ ಅನುದಾನ ನೀಡಲಾಗುತ್ತಿದೆ. ಇದರ ಮೂಲಕ ಏಷ್ಯಾ ಮತ್ತು ಆಫ್ರಿಕಾದ ಆನೆ ನಾಡುಗಳ ತಜ್ಞರು, ಸಂರಕ್ಷಣೆಕಾರರು ಹಾಗೂ ಯುವಜನರು 2027ರ ಮಾರ್ಚ್‌ನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸಲು ಬೆಂಬಲ ನೀಡಲಾಗುತ್ತದೆ. ಇದರೊಂದಿಗೆ EPI ಯೂತ್ ಅಂಬಾಸಿಡರ್ಸ್ ಕಾರ್ಯಕ್ರಮವನ್ನು ಮೊದಲ ಬಾರಿಗೆ ಭಾರತಕ್ಕೂ ವಿಸ್ತರಿಸಲು ಸಹಾಯ ಮಾಡಲಾಗುತ್ತದೆ.

ತಳಮಟ್ಟದಲ್ಲಿ ಮಾನವ-ಆನೆ ಸಂಘರ್ಷದ ಘಟನೆಗಳನ್ನು ತ್ವರಿತವಾಗಿ ಎದುರಿಸಲು ತ್ವರಿತ ಸ್ಪಂದನಾ ಪಶುವೈದ್ಯಕೀಯ ತಂಡಗಳು (Rapid Response Veterinary Teams), ಥರ್ಮಲ್ ಡ್ರೋನ್ ಕಣ್ಗಾವಲು ಮತ್ತು ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಾಯಗೊಂಡ ಆನೆಗಳಿಗೆ ಸಕಾಲದಲ್ಲಿ ಸರಿಯಾದ ವೈದ್ಯಕೀಯ ನೆರವು ನೀಡುವುದರೊಂದಿಗೆ, ಮಾನವರು ಮತ್ತು ಆನೆಗಳ ನಡುವೆ ಶಾಶ್ವತವಾದ ಉತ್ತಮ ಸಹ-ಅಸ್ತಿತ್ವವನ್ನು (Co-existence) ಉತ್ತೇಜಿಸುವುದು ಈ ಪ್ರಯತ್ನಗಳ ಮುಖ್ಯ ಉದ್ದೇಶವಾಗಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!