ಬಂಟ್ವಾಳ, ಆಗಸ್ಟ್ 18 : ಅಪ್ರಾಪ್ತ ಬಾಲಕನೊಬ್ಬನಿಗೆ ಬಸ್ಸಿನಲ್ಲಿ ಅನುಚಿತವಾಗಿ ವರ್ತಿಸಿ, ಬಳಿಕ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಒಡ್ಡಿದ್ದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ವಿಟ್ಲ ಕೊಂಡಗಾಯಿ ನಿವಾಸಿ ಉಮೇಶ್ (53) ಬಂಧಿತ ಆರೋಪಿ.
ಘಟನೆಯ ವಿವರ:
ಆಗಸ್ಟ್ 15, 2026 ರಂದು ಅಪ್ರಾಪ್ತ ಸಂತ್ರಸ್ಥ ಬಾಲಕನು ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆಯಿಂದ ಪುತ್ತೂರು ಕಡೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಹತ್ತಿದ ಅಪರಿಚಿತ ವ್ಯಕ್ತಿಯೊಬ್ಬ ಬಾಲಕನ ಪಕ್ಕದಲ್ಲಿ ಕುಳಿತು ಅನುಚಿತವಾಗಿ ವರ್ತಿಸಿದ್ದನು. ಬಳಿಕ ಬಾಲಕನು ಮನೆಗೆ ತೆರಳಿದಾಗ ಅಲ್ಲಿಗೂ ಬಂದ ಆ ವ್ಯಕ್ತಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಒಡ್ಡಿದ್ದನು.
ಈ ಕುರಿತು ನೀಡಲಾದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 179/2026, ಕಲಂ: 4(2) ಪೋಕ್ಸೋ ಕಾಯ್ದೆ 2012 ಹಾಗೂ ಕಲಂ: 351(2) BNS 2023 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ವಿಟ್ಲ ಠಾಣೆಯ ಪೊಲೀಸರು ಆರೋಪಿ ಉಮೇಶ್ ಅವರನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.