ಮುಂಬೈ, ಆಗಸ್ಟ್ 17 : ಬಾಲಿವುಡ್ ಸ್ಟಾರ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್‌ಗೆ ಕಾನೂನು ತೊಡಕು ಎದುರಾಗಿದೆ. ನಿಷೇಧಿತ ಪಾನ್ ಮಸಾಲಾವನ್ನು ಪರೋಕ್ಷವಾಗಿ ಪ್ರಚಾರ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಈ ಮೂವರು ನಟರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
2024ರಲ್ಲಿ ಈ ಮೂವರು ನಟರು ವಿಮಲ್ ಎಲೈಚಿ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ, ಮಹಾರಾಷ್ಟ್ರದಲ್ಲಿ ಪಾನ್ ಮಸಾಲಾ ಉತ್ಪಾದನೆ, ಸಂಗ್ರಹಣೆ ಹಾಗೂ ಮಾರಾಟ ಸಂಪೂರ್ಣ ನಿಷೇಧಿಸಲ್ಪಟ್ಟಿದೆ. 'ವಿಮಲ್ ಎಲೈಚಿ' ಹೆಸರಿನಲ್ಲಿ ಬ್ರ್ಯಾಂಡ್‌ನ ಅಡಿಯಲ್ಲಿ ಪರೋಕ್ಷವಾಗಿ ನಿಷೇಧಿತ ಪಾನ್ ಮಸಾಲಾವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು 9 ಪುಟಗಳ ನೋಟಿಸ್‌ನಲ್ಲಿ ಎಫ್‌ಡಿಎ ಗಂಭೀರವಾಗಿ ಉಲ್ಲೇಖಿಸಿದೆ.
ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಇಂತಹ ದಾರಿತಪ್ಪಿಸುವ ಜಾಹೀರಾತುಗಳಿಗೆ 10 ಲಕ್ಷದಿಂದ 50 ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದ್ದು, ರಾಯಭಾರಿಗಳನ್ನು 3 ವರ್ಷಗಳವರೆಗೆ ಯಾವುದೇ ಜಾಹೀರಾತಿನಲ್ಲಿ ಭಾಗವಹಿಸದಂತೆ ನಿಷೇಧಿಸುವ ಕಾನೂನು ಅವಕಾಶವಿದೆ.
ಈ ಹಿಂದೆ 2022ರಲ್ಲಿ ಇದೇ ರೀತಿಯ ವಿವಾದದಿಂದಾಗಿ ನಟ ಅಕ್ಷಯ್ ಕುಮಾರ್ ಜಾಹೀರಾಟಿನಿಂದ ಹಿಂದೆ ಸರಿದು ಕ್ಷಮೆಯಾಚಿಸಿದ್ದು ಇಲ್ಲಿ ಸ್ಮರಣೀಯ. ಒಟ್ಟಿನಲ್ಲಿ, ಸ್ಟಾರ್ ನಟರ ಈ ಪರೋಕ್ಷ ಜಾಹೀರಾತು ಈಗ ದೊಡ್ಡ ಸಂಚಲನ ಸೃಷ್ಟಿಸಿದೆ.
