ಕಟೀಲು, ಆಗಸ್ಟ್ 18: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಪವಿತ್ರ ಯಕ್ಷಗಾನದ ವಿರುದ್ಧ ನಡೆಯುತ್ತಿದೆ ಎನ್ನಲಾದ ಅಪಪ್ರಚಾರವನ್ನು ತೀವ್ರವಾಗಿ ಖಂಡಿಸಿ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ದಕ್ಷಿಣ ಕನ್ನಡ ವತಿಯಿಂದ ಕಟೀಲು ಕ್ಷೇತ್ರದ ಅಂಗಳದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು.
ಕಟೀಲು ಕ್ಷೇತ್ರ ಹಾಗೂ ಅತ್ಯಂತ ಧರ್ಮನಿಷ್ಠೆಯಿಂದ ನಡೆಯುವ ಯಕ್ಷಗಾನ ಮೇಳದ ವಿರುದ್ಧ ವ್ಯವಸ್ಥಿತವಾದ ಅಪಪ್ರಚಾರಗಳು ನಡೆಯುತ್ತಿದ್ದು, ಈ ಧಾರ್ಮಿಕ ಆಕ್ರಮಣವನ್ನು ಖಂಡಿಸಿ ಹಾಗೂ ಕ್ಷೇತ್ರದ ಪವಿತ್ರತೆಯನ್ನು ಎತ್ತಿಹಿಡಿಯಲು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಜಿಲ್ಲೆಯ ಸಮಸ್ತ ಭಕ್ತಾದಿಗಳು, ಸನಾತನ ಧರ್ಮಪ್ರೇಮಿಗಳು ಮತ್ತು ಯಕ್ಷಗಾನ ಅಭಿಮಾನಿಗಳು ಒಂದಾಗಿ ಈ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇತ್ತೀಚೆಗೆ ಕೆಲವರು ಶ್ರೀ ಕಟೀಲು ದುರ್ಗಾಪರಮೇಶ್ವರಿ ಮತ್ತು ಯಕ್ಷಗಾನದ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಸಂಪೂರ್ಣವಾಗಿ ಆಧಾರರಹಿತ, ದುರುದ್ದೇಶಪೂರಿತ ಹಾಗೂ ಸಮಾಜದಲ್ಲಿ ಗೊಂದಲ ಮೂಡಿಸುವ ಪ್ರಯತ್ನವಾಗಿದೆ.
ತಾಯಿ ಕಟೀಲು ದುರ್ಗಾಪರಮೇಶ್ವರಿಯ ದೃಷ್ಟಿಯಲ್ಲಿ ಪ್ರತಿಯೊಬ್ಬ ಭಕ್ತನೂ ಸಮಾನರಾಗಿದ್ದು, ದೇವಿಯ ಕೃಪೆ ಯಾವುದೇ ಜಾತಿ-ಕುಲಗಳ ಭೇದಭಾವವಿಲ್ಲದೆ ಪ್ರತಿಯೊಬ್ಬ ಸನಾತನ ಹಿಂದೂ ಬಂಧುವಿಗೂ ತಲುಪುತ್ತದೆ. ದಶಕಗಳಿಂದ ಕಟೀಲು ಮೇಳವು ಸರ್ವ ಸಮಾಜದ ಭಕ್ತರ ಮನೆಗಳಲ್ಲಿ ಶ್ರದ್ಧೆಯಿಂದ ಆಟಗಳನ್ನು ಆಡಿಸಿಕೊಂಡು ಬಂದಿದ್ದು, ಇಲ್ಲಿ ಜಾತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಯಕ್ಷಗಾನದ ರಂಗಸ್ಥಳ ಹಾಗೂ ಮಧ್ಯಾಹ್ನ ಶ್ರೀ ದೇವರನ್ನು ಇಟ್ಟು ಪೂಜಿಸುವ ಮನೆಗಳು ಅತ್ಯಂತ ಪವಿತ್ರವಾದವುಗಳಾಗಿದ್ದು, ಅಲ್ಲಿ ಮಡಿ, ಶೌಚ, ಶ್ರದ್ಧೆ ಹಾಗೂ ಆಚಾರ-ವಿಚಾರಗಳ ಶುಚಿತ್ವ ಕಡ್ಡಾಯವಾಗಿದೆ. ಸಾಂಪ್ರದಾಯಿಕವಾಗಿ ನಿಯಮಗಳನ್ನು ಪಾಲಿಸುವ ಯಾವುದೇ ಭಕ್ತನ ಮನೆಗೆ ದೇವರು ಪ್ರವೇಶಿಸಲು ಮತ್ತು ಪೂಜೆಗೊಳ್ಳಲು ಯಾವುದೇ ತಡೆಯಿಲ್ಲ.
ಧಾರ್ಮಿಕ ನಿಯಮಗಳು ಮತ್ತು ಶುಚಿತ್ವದ ಆಚಾರಗಳನ್ನು 'ಜಾತಿ ತಾರತಮ್ಯ' ಎಂದು ಬಿಂಬಿಸಿ, ಕೆಲವರು ಧಾರ್ಮಿಕ ಶ್ರದ್ಧೆಯನ್ನು ಸಾಮಾಜಿಕ ಒಡೆತನಕ್ಕೆ ಬಳಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ತುಳುನಾಡಿನಲ್ಲಿ ಸೌಹಾರ್ದತೆ ಮತ್ತು ಭಕ್ತಿಭಾವದಿಂದ ನಡೆಯುತ್ತಿರುವ ಕಟೀಲು ಮೇಳದ ಸೇವೆಯ ಮೇಲೆ ಕಳಂಕ ತಂದು ಭಕ್ತರ ನಡುವೆ ವೈಷಮ್ಯ ಸೃಷ್ಟಿಸಲು ಹುನ್ನಾರ ನಡೆಸಲಾಗುತ್ತಿದೆ.
ವಿಎಚ್‌ಪಿ ಯಾವಾಗಲೂ ಹಿಂದೂ ಧರ್ಮದ ಆಚಾರ-ವಿಚಾರಗಳು, ಕ್ಷೇತ್ರಗಳು ಮತ್ತು ಯಕ್ಷಗಾನದಂತಹ ಪವಿತ್ರ ಕಲೆಗಳ ಗೌರವ ರಕ್ಷಣೆಗೆ ದೃಢವಾಗಿ ಬದ್ಧವಾಗಿದೆ. ಅಪಪ್ರಚಾರ ಮಾಡುವ ದುಷ್ಟ ಶಕ್ತಿಗಳಿಗೆ ಸದ್ಬುದ್ಧಿ ಸಿಗಲಿ ಹಾಗೂ ಕ್ಷೇತ್ರದ ಪವಿತ್ರತೆ ಸದಾ ಕಾಪಾಡಲ್ಪಡಲಿ ಎಂದು ಪ್ರಾರ್ಥಿಸಲಾಗಿದ್ದು, ಸಮಸ್ತ ಭಕ್ತರು ಇಂತಹ ಸುಳ್ಳು ಅಪಪ್ರಚಾರಗಳಿಗೆ ಕಿವಿಗೊಡದೆ ಸಾಂಪ್ರದಾಯಿಕ ಪರಂಪರೆಯನ್ನು ಒಗ್ಗಟ್ಟಿನಿಂದ ರಕ್ಷಿಸಬೇಕಾಗಿ ವಿನಂತಿಸಲಾಯಿತು..