ಉಪ್ಪಿನಂಗಡಿ, ಆಗಸ್ಟ್ 16: ಕೆಲಸ ಮುಗಿಸಿ ರಾತ್ರಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದವರನ್ನು ಅಕ್ರಮವಾಗಿ ತಡೆದು, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಣಾಲು ಕೋಲ್ಪೆ ಎಂಬಲ್ಲಿ ನಡೆದಿದೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಠಾಣಾ ವ್ಯಾಪ್ತಿಯ ನಿವಾಸಿ ಫಾಯಿಝಾ (18) ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆಯ ಹಿನ್ನೆಲೆ:
ದಿನಾಂಕ 12-08-2026 ರಂದು ರಾತ್ರಿ ಪಿರ್ಯಾದಿದಾರರಾದ ಫಾಯಿಝಾ ಅವರು ಕೆಲಸ ಮುಗಿಸಿ ಕಾರಿನಲ್ಲಿ ತಮ್ಮ ಪರಿಚಯಸ್ಥರಾದ ಸಿಪ್ನಾನ್, ಝಾಹಿರ್ ಹಾಗೂ ಸಫಿಯಾ ಎಂಬವರೊಂದಿಗೆ ಮನೆಗೆ ಬಂದಿದ್ದರು. ಫಾಯಿಝಾ ಅವರನ್ನು ಮನೆಯಲ್ಲಿ ಬಿಟ್ಟು ಉಳಿದ ಮೂವರು ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ, ಕಡಬ ಕೊಣಾಲು ಕೋಲ್ಪೆ ಎಂಬಲ್ಲಿ ದಾರಿಮಧ್ಯೆ ಆರೋಪಿಗಳು ಕಾರನ್ನು ಅಕ್ರಮವಾಗಿ ತಡೆದು ನಿಲ್ಲಿಸಿದ್ದಾರೆ.ಜಾಬಿರ್, ಸಿದ್ದೀಕ್, ಉನೈಸ್, ರಂಶಿಕ್, ಸಂಶುದ್ದೀನ್, ಜಾಫರ್, ಆಶಿತ್, ಆಚೂರು @ ಅಶ್ರಫ್ ಹಾಗೂ ಅಶ್ರಫ್ ಕೋಲ್ಪೆ ಎಂಬವರುಗಳು ಒಟ್ಟಾಗಿ ಸೇರಿಕೊಂಡು ಕಾರಿನಲ್ಲಿದ್ದವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಅಷ್ಟೇ ಅಲ್ಲದೆ, ಸ್ಥಳಕ್ಕೆ ಬಂದ ಪಿರ್ಯಾದಿದಾರರಾದ ಫಾಯಿಝಾ, ಜಮಾಲ್ ಹಾಗೂ ಪಿರ್ಯಾದಿದಾರರ ತಂಗಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 107/2026 ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಕಲಂ: 189(2), 191(2), 126(2), 352, 115(2), 351(2) ಜೊತೆಗೆ 190 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.