ಬೆಂಗಳೂರು, ಆಗಸ್ಟ್ 03: ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ ಇದೀಗ ವಿಧಾನಪರಿಷತ್ ನ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಹೊಸ ಜವಾಬ್ದಾರಿಯ ಮಜಲು ಪ್ರವೇಶಿಸಿದ್ದಾರೆ.ತುಮಕೂರು ಜಿಲ್ಲೆಯ ನೊಣವಿನಕೆರೆ ಗ್ರಾಮದಲ್ಲಿ 1957ರ ಮೇ 10ರಂದು ಜನಿಸಿದ್ದ ಉಮಾಶ್ರೀ ಅವರು ಬಡತನದಲ್ಲೇ ಬೆಳೆದಿದ್ದರು. ಆದರೆ ಬರುಬರುತ್ತ ಅದೆಲ್ಲವನ್ನು ಮೆಟ್ಟಿ ನಿಂತು ವೃತ್ತಿ ರಂಗಭೂಮಿಯಲ್ಲಿ ಹಲವಾರು ಪೌರಾಣಿಕ, ಐತಿಹಾಸಿಕ ಪಾತ್ರಗಳನ್ನು ನಿರ್ವಹಿಸಿ ರಂಗಭೂಮಿಯಲ್ಲಿ ಖ್ಯಾತಿ ಪಡೆದಿದ್ದರು. ಸುಮಾರು 400 ಕ್ಕೂ ಅಧಿಕ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ಉಮಾಶ್ರೀ 1984ರಲ್ಲಿ ಕಾಶೀನಾಥ್ ನಿರ್ದೇಶನದ ಅನುಭವ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡುವ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ಉಮಾಶ್ರೀ ಅವರು ಗುಲಾಬಿ ಟಾಕೀಸ್ ಸಿನಿಮಾದಲ್ಲಿನ ತಮ್ಮ ಅಪ್ರತಿಮ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
1994ರಲ್ಲಿ ಬಂಗಾರಪ್ಪನವರು ಸ್ಥಾಪಿಸಿದ್ದ ಕೆಸಿಪಿ ಪಕ್ಷದಿಂದ ರಾಜಕೀಯ ಪ್ರವೇಶಿಸಿದ ಉಮಾಶ್ರೀ ಅಂದು ಹುಬ್ಬಳ್ಳಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಜಯಗೊಂಡಿದ್ದರು. 2001ರಲ್ಲಿ ಮೊದಲ ಬಾರಿಗೆ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು. 2008ರವರೆಗೂ ವಿಧಾನಪರಿಷತ್ ಸದಸ್ಯೆಯಾಗಿದ್ದ ಅವರು, 2008ರಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಅಖಾಡಕ್ಕಿಳಿದು ಬಿಜೆಪಿಯ ಸಿದ್ದು ಸವದಿ ವಿರುದ್ಧ ಸೋತಿದ್ದರು. ನಂತರ 2013ರಲ್ಲಿ ತೇರದಾಳ ಕ್ಷೇತ್ರದಲ್ಲಿ ಸಿದ್ದು ಸವದಿ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ 5 ವರ್ಷ ಉತ್ತಮ ಕಾರ್ಯನಿರ್ವಹಿಸಿದ್ದರು. 2018ರ ಚುನಾವಣೆಯಲ್ಲಿ ಉಮಾಶ್ರೀ ಪರಾಜಯಗೊಂಡಿದ್ದರು. 2023ರಲ್ಲಿ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಗೊಂಡರು ಇದೀಗ ವಿಧಾನಪರಿಷತ್ ಉಪಸಭಾಪತಿ ಹುದ್ದೆಯನ್ನು ಅಲಂಕರಿಸಿದ್ದಾರೆ.
ಪಾಲಕ್ಕಾಡ್‌ನಲ್ಲಿ ಜಲಪಾತಕ್ಕೆ ಬಿದ್ದು ತಮಿಳುನಾಡು ಮಹಿಳಾ ಪ್ರವಾಸಿ ಮೃತ್ಯು..!