BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Ullala Robbery ಉಳ್ಳಾಲ ಮುಡಿಪುವಿನಲ್ಲಿ ಹಾಡಹಗಲೇ ದರೋಡೆ, ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ದೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಲೂಟಿ..!


ಮಂಗಳೂರು, ಆಗಸ್ಟ್ 05: ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ  ಮುಡಿಪುವಿನಲ್ಲಿ ವೃದ್ಧ ಮಹಿಳೆಯನ್ನು ಬೆದರಿಸಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ ಘಟನೆ ನಡೆದಿದೆ. ಮುಡಿಪು ಸಮೀಪದ ಕಾಯರಗೋಳಿ ನಿವಾಸಿ ಭವಾನಿ ಆಚಾರ್ಯ ಎಂಬುವರೇ ದರೋಡೆಗೊಳಗಾದ ವೃದ್ದೆಯಾಗಿದ್ದಾರೆ. 

ಬಾಡಿಗೆ ಮನೆ ಬೇಕೆಂದು ವಿಚಾರಿಸುವ ನೆಪದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಈ ಕುಕೃತ್ಯ ಮಾಡಿದ್ದು ವೃದ್ಧೆ  ಭವಾನಿಯವರ  ಬಾಯಿ ಒತ್ತಿ ಹಿಡಿದು ಹಲ್ಲೆ ನಡೆಸಿ ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.  ಘಟನೆಗೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು ACP ವಿಜಯಕ್ರಾಂತಿ ಹೆಸರಿನಲ್ಲಿ 16 ಪೊಲೀಸರ ತಂಡ ರಚನೆ ಮಾಡಲಾಗಿದೆ. 

ಘಟನೆಯ ವಿವರ:

 ಕಾಯರಗೋಳಿಯಲ್ಲಿ ಮಗನೊಂದಿಗೆ ವಾಸವಾಗಿದ್ದ ಭವಾನಿ ಅವರು ಮಧ್ಯಾಹ್ನ ಸುಮಾರು 1:15 ರ ವೇಳೆಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಈ ವೇಳೆ ಯಾರೋ ಬಾಗಿಲು ತಟ್ಟಿದ ಶಬ್ಧ ಕೇಳಿ ಬಾಗಿಲು ತೆರೆದಾಗ, ಮೆಟ್ಟಿಲಿನ ಬಳಿ ಇಬ್ಬರು ಯುವಕರು ನಿಂತಿದ್ದರು. ಅವರಲ್ಲಿ ವಿಚಾರಿಸಿದಾಗ, "ನಾವು ಇನ್ಫೋಸಿಸ್​ನಲ್ಲಿ ಕೆಲಸ ಮಾಡುತ್ತಿದ್ದೇವೆ, ನಾವು ಬ್ರಾಹ್ಮಣರು, ಬಾಡಿಗೆಗೆ ಮನೆ ಇದೆಯೇ? ಇಲ್ಲಿ ವೆಜ್ ಅಷ್ಟೇ ಅಲ್ಲವೇ?" ಎಂದು ಮಾತುಕತೆ ಬೆಳೆಸಿದ್ದಾರೆ. ಅದಕ್ಕೆ ಭವಾನಿ ಅವರು, "ನಾವು ಬ್ರಾಹ್ಮಣರಿಗೆ ಮಾತ್ರ ಮನೆ ಕೊಡುವುದು, ಮಗನಲ್ಲಿ ಕೇಳಿ ಹೇಳುತ್ತೇನೆ" ಎಂದಿದ್ದಾರೆ. ಆಗ ಆರೋಪಿಗಳು ಮಗನ ಮೊಬೈಲ್ ನಂಬರ್ ಕೇಳಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ ಭವಾನಿ ಅವರು ಬಾಗಿಲು ಹಾಕಿ ಒಳಗೆ ಹೋಗಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಬಾಗಿಲನ್ನು ಬಲವಾಗಿ ದೂಡಿ ಮನೆಗೆ ಅಕ್ರಮವಾಗಿ ನುಗ್ಗಿದ್ದಾರೆ. ಇದರಿಂದ ಭವಾನಿ ಅವರು ಮನೆಯ ಹಾಲ್​ನಲ್ಲಿ ಕೆಳಗೆ ಬಿದ್ದಿದ್ದು, ಕಿರುಚಾಡಲು ತೊಡಗಿದ್ದಾರೆ. ತಕ್ಷಣವೇ ಒಬ್ಬ ಆರೋಪಿ ಭವಾನಿ ಅವರ ಬಾಯಿಯನ್ನು ಕೈಯಿಂದ ಗಟ್ಟಿಯಾಗಿ ಒತ್ತಿ ಹಿಡಿದರೆ, ಇನ್ನೊಬ್ಬ ಅವರ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ.

ಬಾಯಿ ಒತ್ತಿ ಹಿಡಿದಿದ್ದ ಆರೋಪಿಯು ವೃದ್ಧೆಯ ಬಲ ಕೈಯಲ್ಲಿದ್ದ 8 ಗ್ರಾಂ ತೂಕದ ಬಂಗಾರದ ಬಳೆಯನ್ನು ಕಳಚಿದ್ದು, ಬಳಿಕ ಎಡ ಕೈಯಲ್ಲಿದ್ದ ಬಳೆಯನ್ನು ಬಲವಂತವಾಗಿ ತೆಗೆಯಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ವೃದ್ಧೆಯ ಎಡಗೈ ಮಣಿಗಂಟಿಗೆ ಗಾಯಗಳಾಗಿದೆ. ಆಭರಣಗಳನ್ನು ದೋಚಿದ ಬಳಿಕ ಆರೋಪಿಗಳು ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಪರಾರಿಯಾಗಿದ್ದಾರೆ. ಘಟನೆ ನಡೆದ ಅರ್ಧ ಗಂಟೆಯ ನಂತರ ಮನೆಗೆ ಆಗಮಿಸಿದ ಮಗಳು ಪ್ರತಿಭಾ ಅವರಿಗೆ ವಿಷಯ ತಿಳಿಸಿ ಬಳಿಕ ಮಗನಿಗೆ ಮಾಹಿತಿ ನೀಡಿದ್ದಾರೆ.

ದೋಚಲಾದ 16 ಗ್ರಾಂ ಚಿನ್ನದ ಸರ ಹಾಗೂ 8 ಗ್ರಾಂ ಚಿನ್ನದ ಬಳೆಯ ಒಟ್ಟು ಮೌಲ್ಯ 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದ ಇಬ್ಬರು ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!