ಉಡುಪಿ, ಆಗಸ್ಟ್ 07: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಿಂದ ಬ್ರಹ್ಮಾವರಕ್ಕೆ ತೆರಳುವ ಮಾರ್ಗದ ಹುತ್ತುರ್ಕೆ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ. ಸದಾನಂದ ನಾಯಕ್(55) ಮರ ಬಿದ್ದು ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ.
ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸದಾನಂದರ ಮೃತದೇಹ ಕಾರಿನೊಳಗೆ ಸಿಲುಕಿಕೊಂಡಿತ್ತು. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿದ್ದು, ಕಾರಿನ ಮೇಲಿದ್ದ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಮರ ತೆರವುಗೊಳಿಸಿದ ಬಳಿಕವಷ್ಟೇ ಮೃತದೇಹವನ್ನು ಕಾರಿನಿಂದ ಹೊರತೆಗೆಯಲು ಸಾಧ್ಯವಾಯಿತು. ಘಟನೆಯಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.
