ಉಡುಪಿ, ಆಗಸ್ಟ್ 27 : ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಮನೆಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬರೋಬ್ಬರಿ 23 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪೆರಂಪಳ್ಳಿ ಕುಂಜಿಬೆಟ್ಟು ನಿವಾಸಿ ಅರುಣ್ ಎಸ್.ವಿ. (43) ಹಾಗೂ ತೆಂಕನಿಡಿಯೂರು ಗ್ರಾಮದ ಕೌಶೀಕ್ (19) ಬಂಧಿತ ಆರೋಪಿಗಳಾಗಿದ್ದಾರೆ.
ಆಗಸ್ಟ್ 11ರಂದು ಪುತ್ತೂರು ಗ್ರಾಮದ ಭಗವತಿ ಲೇಔಟ್‌ನ ಸನಂ ಎಂಬುವವರ ಮನೆಯ ಟೆರೇಸ್ ಬಾಗಿಲು ಮುರಿದು, 10,000 ಎಇಡಿ ವಿದೇಶಿ ಕರೆನ್ಸಿ ಹಾಗೂ ನಗದನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಐಪಿಎಸ್ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿಎಸ್‌ಐ ಪ್ರಕಾಶ್ ನೇತೃತ್ವದ ವಿಶೇಷ ತಂಡವು, ಆಗಸ್ಟ್ 23ರಂದು ಪೆರಂಪಳ್ಳಿ ಸಂತೋಷನಗರದಲ್ಲಿ ಆರೋಪಿಗಳನ್ನು ಬಂಧಿಸಿದೆ. ಇವರಿಂದ ಸುಮಾರು 88 ಗ್ರಾಂ ಚಿನ್ನ, 1 ಕೆಜಿ 360 ಗ್ರಾಂ ಬೆಳ್ಳಿ ಆಭರಣ, ವಿದೇಶಿ ಕರೆನ್ಸಿ, ₹33,000 ನಗದು, ಆಟೋರಿಕ್ಷಾ ಹಾಗೂ ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಸೇರಿದಂತೆ ಒಟ್ಟು ₹23,56,230 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು. ಇವರ ವಿರುದ್ಧ ಉಡುಪಿ ನಗರ ಹಾಗೂ ಮಲ್ಪೆ ಠಾಣೆಗಳಲ್ಲಿ ಒಟ್ಟು 5 ಕಳ್ಳತನ ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ, ಬಂಧಿತ ಆರೋಪಿ ಅರುಣ್ ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ 9 ವರ್ಷಗಳ ಶಿಕ್ಷೆ ಅನುಭವಿಸಿ, 2025ರ ಜುಲೈನಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.