BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಉಡುಪಿ

Udupi: Caste abuse and atrocity case - Four accused sentenced to imprisonment ಉಡುಪಿ: ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣ - ನಾಲ್ವರು ಆರೋಪಿಗಳಿಗೆ ಜೈಲು ಶಿಕ್ಷೆ


ಉಡುಪಿ, ಆಗಸ್ಟ್ 29 : ಉಡುಪಿ ಜಿಲ್ಲೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಲೆವೂರು ಗ್ರಾಮದ ಪ್ರಗತಿ ನಗರದ ಪರಿಶಿಷ್ಟ ಜಾತಿಗೆ ಸೇರಿದ ಜಯಪ್ರಕಾಶ್ ಅವರ ಪತ್ನಿ ಪಂಜಿಮಾ ಅವರಿಗೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ ಪ್ರಕರಣದ ಎಲ್ಲಾ ನಾಲ್ಕು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ನೀಡಿದೆ.

ಅಲೆವೂರು ಗ್ರಾಮದ ಪ್ರಗತಿ ನಗರದ ನಿವಾಸಿಗಳಾದ ಶೋಭಾ, ಆಕೆಯ ಮಗಳು ಚೈತ್ರಾ, ಶೋಭಾ ಅವರ ಸ್ನೇಹಿತ ಭಾಸ್ಕರ ಶೆಟ್ಟಿ ಹಾಗೂ ಚೈತ್ರಾ ಅವರ ಸ್ನೇಹಿತ ಭರತ್ ಗಾಣಿಗ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ.

ಪ್ರಕರಣದ ಹಿನ್ನೆಲೆ:

ಪಂಜಿಮಾ ಅವರ ಮನೆಯ ಬಳಿ ನೆರೆಮನೆಯ ಶೋಭಾ ಮತ್ತು ಚೈತ್ರಾ ಜಾತಿ ನಿಂದನೆ ಮಾಡಿ ಬೈಯುವುದು, ಮನೆಯ ಮುಂದೆ ತ್ಯಾಜ್ಯ ವಸ್ತುಗಳು, ಕೋಳಿ ಮಾಂಸದ ಮೂಳೆಗಳು ಹಾಗೂ ಅಮಲು ಪದಾರ್ಥದ ಬಾಟಲಿಗಳನ್ನು ಎಸೆಯುತ್ತಿದ್ದರು. ಇದನ್ನು ಆಕ್ಷೇಪಿಸಿದಾಗ ತಾಯಿ-ಮಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.

2019 ರ ಡಿಸೆಂಬರ್ 2 ಮತ್ತು 3ರಂದು ತಾಯಿ-ಮಗಳು ಪಂಜಿಮಾ ಅವರಿಗೆ ಜಾತಿ ನಿಂದನೆ ಮಾಡಿದ್ದು, ಇದನ್ನು ಪ್ರಶ್ನಿಸಿದಾಗ ಭಾಸ್ಕರ ಶೆಟ್ಟಿ ಮತ್ತು ಭರತ್ ಗಾಣಿಗ ದಂಪತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಡಿವೈಎಸ್ಪಿ ಟಿ.ಆರ್. ಜಯಶಂಕರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು ಮತ್ತು ಶಿಕ್ಷೆಯ ವಿವರ:

ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್. ಗಂಗಣ್ಣವರ್ ಅವರು ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಿದ್ದಾರೆ:

ಎಲ್ಲಾ ಆರೋಪಿಗಳಿಗೆ ಎಸ್‌ಸಿ/ಎಸ್‌ಟಿ ಕಾಯ್ದೆ ಹಾಗೂ ಐಪಿಸಿ ವಿವಿಧ ಸೆಕ್ಷನ್‌ಗಳಡಿ ತಲಾ 6 ತಿಂಗಳು ಸಾದಾ ಶಿಕ್ಷೆ ಮತ್ತು ತಲಾ 1,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕು.

ಬೆದರಿಕೆ ಹಾಕಿದವರಿಗೆ ಹೆಚ್ಚುವರಿ ಶಿಕ್ಷೆ: ಕೊಲೆ ಬೆದರಿಕೆ ಹಾಕಿದ ಆರೋಪಿ ಭಾಸ್ಕರ ಶೆಟ್ಟಿ ಮತ್ತು ಭರತ್ ಗಾಣಿಗನಿಗೆ 9 ತಿಂಗಳು ಸಾದಾ ಶಿಕ್ಷೆ ಹಾಗೂ 2,000 ರೂ. ದಂಡ ವಿಧಿಸಲಾಗಿದೆ.

 ಆರೋಪಿಗಳಿಂದ ವಸೂಲಾದ ದಂಡದ ಮೊತ್ತದಲ್ಲಿ 15,000 ರೂ.ಗಳನ್ನು ಸಂತ್ರಸ್ತೆ ಪಂಜಿಮಾ ಅವರಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರದ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!