u t Khader ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆಯಿಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸುದ್ದಿವಾಣಿ
8/16/2026 03:14:00 PM
ಮಂಗಳೂರು, ಆಗಸ್ಟ್ 16: ತಂಬಾಕು, ನಿಕೊಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳನ್ನು ನಿಷೇಧಿಸಿರುವ ಆದೇಶದಿಂದ ಸರ್ಕಾರ ಹಿಂದೆ ಸರಿದಿಲ್ಲ ಎಂದು ಆರೋಗ್ಯ ಸಚಿವ ಯು ಟಿ ಖಾದರ್ ಅವರು ಸ್ಪಷ್ಟಪಡಿಸಿದ್ದಾರೆ. ತಂಬಾಕು, ನಿಕೊಟಿನ್ ಹೊಂದಿರುವ ಗುಟ್ಕಾ ಪಾನ್ ಮಸಾಲ ಉತ್ಪನ್ನಗಳನ್ನು ನಿಷೇಧಿಸಿ ಹೊರಡಿಸಿದ ಅಧಿಸೂಚನೆಯಿಂದ ಅಡಿಕೆ ಬೆಳೆಗಾರರಲ್ಲಿ ಉಂಟಾಗಿರುವ ಗೊಂದಲದ ಕುರಿತು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು 'ಪಾನ್ ಮಸಾಲದಲ್ಲಿ ನಿಕೊಟಿನ್ ನಿಷೇಧ ಆದೇಶದಿಂದ ಅಡಿಕೆ ಬೆಳೆಗಾರರಿಗೆ ಏನೂ ಸಮಸ್ಯೆ ಇಲ್ಲ. 'ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ' ಎಂದು ಸ್ಪಷ್ಟಪಡಿಸಿದರು. 'ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಕೆಲಸವನ್ನು ಈ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಅಡಿಕೆ ಬೆಳೆಗಾರರಿಗೆ ಈ ತೀರ್ಮಾನದಿಂದ ಬೆಲೆ ಹೆಚ್ಚಾಗುತ್ತದೆ. ತಕ್ಷಣಕ್ಕೆ ಈ ನಿಷೇಧದಿಂದ ಲಾಭವಾಗಲ್ಲ ಮೂರು ತಿಂಗಳು ಕಾದು ನೋಡಿ ಎಂದಿದ್ದಾರೆ. ಈ 'ಹಿಂದೆ ಕೂಡ ತಾನು ಸಚಿವನಾಗಿದ್ದಾಗ ಗುಟ್ಕಾ ನಿಷೇಧಿಸುವಾಗ ಇದೇ ವಿಚಾರ ಮುನ್ನೆಲೆಗೆ ಬಂದಿತ್ತು. ಆಗ ನಾನು ಬಲವಾಗಿ ಸಮರ್ಥಿಸಿಕೊಂಡಿದ್ದೆ. ಮುಖ್ಯಮಂತ್ರಿ ಕೂಡ ಸಮರ್ಥಿಸಿದ್ದರು. ಅಡಿಕೆ ಬೆಲೆ ಕುಸಿತ ಆಗುವುದಿಲ್ಲ ಎಂದಿದ್ದೆವು. ಮೂರು ತಿಂಗಳು ಆದ ಬಳಿಕ ಅಡಿಕೆ ಬೆಲೆ ಹೆಚ್ಚಾಗಿತ್ತು' ಎಂದರು.
ಟ್ಯಾಗ್ಗಳು:
ದಕ್ಷಿಣ ಕನ್ನಡ
ರಾಜ್ಯ