ಉಳ್ಳಾಲ,ಆಗಸ್ಟ್ 08: ಕೆಲ ದಿನಗಳ ಹಿಂದೆ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದ ಉಳ್ಳಾಲ ಸೋಮೇಶ್ವರ ಮೆಸ್ಕಾಂ ಶಾಖೆಯ ಪವರ್ ಮೆನ್ ಶೇಖ್ ಜಮೀರ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಭೇಟಿ ನೀಡಿದರು. ಅಂಬಿಕಾ ರೋಡ್ ಪಿಲಾರಿನ ಮೃತ ಶೇಖ್ ಜಮೀರ್ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭ ಸರಕಾರ ಮತ್ತು ಮೆಸ್ಕಾಂ ಇಲಾಖೆಯಿಂದ ಸಿಗುವ ರೂ. 1 ಕೋಟಿ ವಿಮೆ ಹಾಗೂ 32 ಲಕ್ಷ ರೂ. ಪರಿಹಾರದ ಆದೇಶ ಪತ್ರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಸರಕಾರ ಹಾಗೂ ಮೆಸ್ಕಾಂನಿಂದ ಸಿಗಬೇಕಾದ ಒಂದು ಕೋಟಿ ರೂಪಾಯಿ ವಿಮೆ ಹಾಗೂ ಮೂವತ್ತೆರಡು ಲಕ್ಷ ರೂಪಾಯಿ ಪರಿಹಾರ, ತಿಂಗಳ ಪೆನ್ನನ್, ಮಡದಿ ಅಥವಾ ಮಗಳಿಗೆ ಉದ್ಯೋಗ ಭದ್ರತೆ ಸೇರಿದಂತೆ ಏನೆಲ್ಲಾ ಸವಲತ್ತುಗಳು ಸಿಗಲಿವೆಯೋ ಅದನ್ನ ಮೃತರ ಕುಟುಂಬಸ್ತರ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು. ಜಮೀರ್ ಅವರ ಅಕಾಲಿಕ ಅಗಲಿಕೆ ಮೆಸ್ಕಾಂ ಇಲಾಖೆ ಹಾಗೂ ಸಮಾಜಕ್ಕೆ ದೊಡ್ಡ ನಷ್ಟವಾಗಿದೆ. ನಾವು ಎಷ್ಟೇ ಸಂತಾಪ ಪರಿಹಾರ ನೀಡಿದರೂ ಜಮೀರನ್ನ ಕಳಕೊಂಡ ದುಃಖವನ್ನು ಸಹಿಸುವ ಶಕ್ತಿಯನ್ನು ಮಾತ್ರ ದೇವರೇ ಸಂತ್ರಸ್ತ ಕುಟುಂಬಕ್ಕೆ ಕರುಣಿಸಬೇಕಾಗಿದೆ ಎಂದರು.
ಉಚ್ಚಿಲ ನಯಾಪಟ್ಟದ ಟ್ರಾನ್ಸ್ ಫಾರ್ಮರ್ ದುರಸ್ತಿ ವೇಳೆ ಜಿಒಎಸ್ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮರ್ ಏರಿದ ಜಮೀರ್ ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗೆಸೆಯಲ್ಪಟ್ಟು ದಾರುಣವಾಗಿ ಸಾವನ್ನಪ್ಪಿದ್ದರು.ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ದಯಾನಂದ್, ಸೋಮೇಶ್ವರ ಶಾಖೆ ಶಾಖಾಧಿಕಾರಿ ನಿತೇಶ್ ಹೊಸಗದ್ದೆ, ಮಂಗಳೂರು ವಿಭಾಗ ಕಾರ್ಯ ನಿರ್ವಾಹಕ ಇಂಜಿನಿಯರ್ ಲೋಹಿತ್ ಮೊದಲಾದವರು ಉಪಸ್ಥಿತರಿದ್ದರು.