ಪುತ್ತೂರು, ಆಗಸ್ಟ್ 07: ಕೆಲ ದಿನಗಳ ಹಿಂದೆ ಪತಿಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಕೆದಂಬಾಡಿ ಗ್ರಾಮದ ಸಾರೆಪುಣಿಯ ಫಾತಿಮತ್ ನಿಶಾನರ ಮನೆಗೆ ಸಚಿವ ಯು ಟಿ ಖಾದರ್ ಅವರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವಾನ ನೀಡಿದರು. ಘಟನೆಯ ಕುರಿತು ನಿಶಾನರ ತಾಯಿ ಜುಬೈದಾ ಹಾಗೂ ಕುಟುಂಬಸ್ಥರಿಂದ ಸಚಿವರು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಯು.ಟಿ. ಖಾದರ್, ಫಾತಿಮತ್ ನಿಶಾನ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ‘ನಾನು ಇಡೀ ಕುಟುಂಬದ ಜೊತೆ ಇದ್ದೇನೆ’ ಜೊತೆಗೆ ಸರ್ಕಾರದಿಂದಲೂ ಆರ್ಥಿಕ ಸಹಾಯದ ಭರವಸೆ ನೀಡಿದರು. ಇದೇ ಸಂದರ್ಭ ಮಗಳ ಸಾವಿನ ಕುರಿತು ತನಿಖೆ ನಡೆಯುತ್ತಿದ್ದರೂ ಇದುವರೆಗೆ ಫಾರೆನ್ಸಿಕ್ ವರದಿ ಬಂದಿಲ್ಲ ಎಂದು ಫಾತಿಮತ್ ನಿಶಾನ ಅವರ ತಾಯಿ ಜುಬೈದಾ ಅವರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಫಾರೆನ್ಸಿಕ್ ವರದಿಗೆ ಅದರದ್ದೇ ಆದ ಪ್ರಕ್ರಿಯೆ ಇದೆ. ವರದಿ ಕ್ರಮಬದ್ಧವಾಗಿ ಹಾಗೂ ಸ್ಪಷ್ಟವಾಗಿ ಸಿದ್ಧಪಡಿಸಬೇಕಾಗಿರುವುದರಿಂದ ಸ್ವಲ್ಪ ವಿಳಂಬವಾಗಬಹುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು. ಪ್ರಕರಣದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಕಾನೂನು ಘಟಕವು ಸಂತ್ರಸ್ತ ಕುಟುಂಬದ ಪರವಾಗಿ ಕಾನೂನು ಹೋರಾಟ ನಡೆಸಲಿದೆ ಎಂಬ ಮಾಹಿತಿ ನೀಡಿದರು.
ಮೃತ ನಿಶಾನಾ ಕುಟುಂಬಕ್ಕೆ 3 ಲಕ್ಷ ಪರಿಹಾರ ಮಂಜೂರು ಶಾಸಕ ಅಶೋಕ್ ರೈ
ಈ ಮಧ್ಯೆ ಫಾತಿಮತ್ ನಿಶಾನ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ಮಂಜೂರುಗೊಳಿಸಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದ ಶಾಸಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವಂತೆಯೂ ಮನವಿ ಮಾಡಿದರು. ನಿಶಾನಾ ಳ ಕುಟುಂಬ ಆರ್ಥಿಕವಾಗಿ ತೀರಾ ಬಡವರಾಗಿದ್ದು ಮೃತಳಿಗೆ ಮೂರು ವರ್ಷ ಪ್ರಾಯದ ಮಗುವಿದ್ದು ,ಕುಟುಂಬ ನೊಂದುಕೊಂಡಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಶಾಸಕರ ಮನವಿಯ ಮೇರೆಗೆ ಸಿ ಎಂ ಅವರು ಮೂರು ಲಕ್ಷ ಪರಿಹಾರ ಮೊತ್ತವನ್ನು ಮಂಜೂರುಗೊಳಿಸಿದ್ದು ಕೆಲವೇ ದಿನಗಳಲ್ಲಿ ಈ ಮೊತ್ತ ನಿಶಾನ ಕುಟುಂಬದ ಖಾತೆಗೆ ಜಮೆಯಾಗಲಿದೆ ಎಂದಿದ್ದಾರೆ.