ಕೋಲ್ಕತ್ತಾ,ಆಗಸ್ಟ್ 19 : ಕೋಲ್ಕತ್ತಾದ ಹೋಟೆಲ್‌ವೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ್ದ ಭೀಕರ ಅಗ್ನಿ ಅವಘಡದಲ್ಲಿ ಮಗು ಸೇರಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ.
ಕೊಲ್ಕತ್ತಾದ ಜನನಿಬಿಡ ಪ್ರದೇಶವಾದ ಫ್ರೀ ಸ್ಕೂಲ್ ಸ್ಟ್ರೀಟ್ ಬಳಿಯ ನ್ಯೂ ಮಾರ್ಕೆಟ್ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಮುಂಜಾನೆ ಭಾರಿ ಅಗ್ನಿ ದುರಂತ ಸಂಭವಿಸಿದೆ. ಒರ್ವ ಮಗು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಮೃತರ ಹೋಟೆಲ್ ಅತಿಥಿಗಳಲ್ಲಿ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶಿ ಪ್ರಜೆಗಳು ಹಾಗೂ ಜಾರ್ಖಂಡ್ ನಿವಾಸಿಯೂ ಸೇರಿದ್ದಾರೆ. ಸುಮಾರು 80 ಜನರನ್ನು ರಕ್ಷಿಸಲಾಗಿದೆ. ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ. ಹೋಟೆಲ್‌ನಲ್ಲಿ ಮೂಲಭೂತ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆ ಇರುವುದು ಕಂಡುಬಂದಿದೆ. ಎಸಿ (ಏರ್ ಕಂಡೀಷನರ್) ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿ ತಲೆಮರೆಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.