BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Rs 20 Bribe case ಮೂವತ್ತು ವರ್ಷಗಳ ಕಾನೂನು ಹೋರಾಟ ಅಂತ್ಯ: 20 ರೂ. ಲಂಚದ ಕೇಸ್‌ನಲ್ಲಿ ಗುಜರಾತ್‌ನ ಇಬ್ಬರು ಸರ್ಕಾರಿ ನೌಕರರು ಕೊನೆಗೂ ದೋಷಮುಕ್ತ..!


ನವದೆಹಲಿ, ಆಗಸ್ಟ್ 20 :  ಮೂವತ್ತು ವರ್ಷಗಳ ಸುದೀರ್ಘ ಕಾನೂನು ಹೋರಾಟ ಅಂತ್ಯವಾಗಿದ್ದು 20 ರೂ. ಲಂಚದ ಕೇಸ್‌ನಲ್ಲಿ ಗುಜರಾತ್‌ನ ಇಬ್ಬರು ಸರ್ಕಾರಿ ನೌಕರರು ಸುಪ್ರ್ರೀಂ ಕೋರ್ಟಿನಿಂದ ಕೊನೆಗೂ ದೋಷಮುಕ್ತಗೊಂಡಿದ್ದಾರೆ!

ಕೇವಲ 20 ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಕಳೆದ ಮೂರು ದಶಕಗಳಿಂದ (30 ವರ್ಷಗಳು) ಕಾನೂನು ಹೋರಾಟ ನಡೆಸುತ್ತಿದ್ದ ಗುಜರಾತ್‌ನ ಇಬ್ಬರು ಸರ್ಕಾರಿ ನೌಕರರಿಗೆ ಕೊನೆಗೂ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೆಳ ನ್ಯಾಯಾಲಯಗಳು ನೀಡಿದ್ದ ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಇಬ್ಬರನ್ನೂ ದೋಷಮುಕ್ತಗೊಳಿಸಿ ಆದೇಶಿಸಿದೆ.

ಏನಿದು 20 ರೂಪಾಯಿ ಪ್ರಕರಣ?

ಈ ಘಟನೆ ನಡೆಸುವುದು 1996ರ ಫೆಬ್ರವರಿಯಲ್ಲಿ. ಗುಜರಾತ್‌ನ ಆನಂದ್ ಜಿಲ್ಲೆಯ ಬೆಚಾರಿ ಗ್ರಾಮ ಪಂಚಾಯತ್ ಕಚೇರಿಗೆ ವಿದ್ಯಾರ್ಥಿಯೊಬ್ಬ ಆದಾಯ ಪ್ರಮಾಣಪತ್ರ ಪಡೆಯಲು ತೆರಳಿದ್ದನು. ಆ ಸಂದರ್ಭದಲ್ಲಿ ಅಲ್ಲಿನ ಗುಮಾಸ್ತ ತನಗೆ 100 ರೂ. ಹಾಗೂ ಸೇವಕನಿಗೆ (ಪ್ಯೂನ್) 20 ರೂ. ಸೇರಿ ಒಟ್ಟು 120 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಕುರಿತು ವಿದ್ಯಾರ್ಥಿ ಭ್ರಷ್ಟಾಚಾರ ನಿರೋಧಕ ದಳಕ್ಕೆ (ACB) ದೂರು ನೀಡಿದ್ದನು. ಎಸಿಬಿ ಅಧಿಕಾರಿಗಳು ಬಲೆ ಬೀಸಿ 120 ರೂ.ಗಳನ್ನು ವಿದ್ಯಾರ್ಥಿಯ ಕೈಗೆ ಕೊಟ್ಟು ಕಳುಹಿಸಿದ್ದರು. ಪ್ರಮಾಣಪತ್ರ ಪಡೆದ ಬಳಿಕ ವಿದ್ಯಾರ್ಥಿ ಸೇವಕನಿಗೆ 20 ರೂಪಾಯಿ ನೀಡಿದ್ದಾಗ ಎಸಿಬಿ ದಾಳಿ ನಡೆಸಿತ್ತು. ಆದರೆ, ಪ್ರಮುಖ ಆರೋಪಿಯಾದ ಗುಮಾಸ್ತನ ಬಳಿ ಯಾವುದೇ ಹಣ ಪತ್ತೆಯಾಗಿರಲಿಲ್ಲ, ಕೇವಲ ಸೇವಕನ ಬಳಿ ಮಾತ್ರ 20 ರೂಪಾಯಿ ಪತ್ತೆಯಾಗಿತ್ತು.

ಸುಪ್ರೀಂ ಕೋರ್ಟ್ ಪೀಠದ ಪ್ರಮುಖ ಅವಲೋಕನ: 

ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಗಿನ ಮಹತ್ವದ ಅಂಶಗಳನ್ನು ಹೊರಹಾಕಿದೆ:

ಬೇಡಿಕೆ ಸಾಬೀತಾಗಿಲ್ಲ: ಕೇವಲ ಲಂಚದ ಹಣ ಪತ್ತೆಯಾದ (Recovery)ಾಕ್ಷಣವೇ ಅದು ಅಪರಾಧವಾಗುವುದಿಲ್ಲ. ಅದಕ್ಕೂ ಮುನ್ನ ಅಧಿಕಾರಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ (Demand) ಎಂಬುದನ್ನು ಸಾಬೀತುಪಡಿಸುವುದು ಕಡ್ಡಾಯ. ಆದರೆ ಈ ಪ್ರಕರಣದಲ್ಲಿ ಸೇವಕ ಲಂಚ ಕೇಳಿದ್ದಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ.

ವ್ಯತಿರಿಕ್ತ ಹೇಳಿಕೆಗಳು: ದೂರುದಾರ ವಿದ್ಯಾರ್ಥಿಯು ವಿಚಾರಣೆ ವೇಳೆ ಪದೇ ಪದೇ ಹೇಳಿಕೆಗಳನ್ನು ಬದಲಿಸಿದ್ದಾನೆ. ಒಮ್ಮೆ 200 ರೂಪಾಯಿ ಕೇಳಿದ್ದರು ಎಂದಿದ್ದರೆ, ಮತ್ತೊಮ್ಮೆ ಸೇವಕ ಲಂಚ ಕೇಳಿಲ್ಲ ಎಂದು ಒಪ್ಪಿಕೊಂಡಿದ್ದಾನೆ.

ಹಬ್ಬದ ಇನಾಮು ವಾದ: ಘಟನೆ ನಡೆದ ದಿನದ ಮರುದಿನ ಈದ್ ಹಬ್ಬವಿದ್ದ ಕಾರಣ, ವಿದ್ಯಾರ್ಥಿ ತನಗೆ ಸಂತೋಷದಿಂದ 20 ರೂಪಾಯಿಗಳನ್ನು ಇನಾಮಾಗಿ ನೀಡಿದ್ದನೇ ಹೊರತು ಅದು ಲಂಚವಲ್ಲ ಎಂದು ಸೇವಕ ತನ್ನ ವಾದದಲ್ಲಿ ತಿಳಿಸಿದ್ದನು. ಈ ಸಮರ್ಥನೆಯನ್ನು ಸುಪ್ರೀಂ ಕೋರ್ಟ್ ಸಮಂಜಸವೆಂದು ಪರಿಗಣಿಸಿದೆ.

30 ವರ್ಷಗಳ ಮಾನಸಿಕ ಯಾತನೆಗೆ ಮುಕ್ತಿ

ಈ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಹಾಗೂ ಗುಜರಾತ್ ಹೈಕೋರ್ಟ್ ಇಬ್ಬರೂ ನೌಕರರನ್ನು ದೋಷಿಗಳು ಎಂದು ತೀರ್ಪು ನೀಡಿದ್ದವು. ಆದರೆ, ಸುಪ್ರೀಂ ಕೋರ್ಟ್ ಈ ಎಲ್ಲಾ ತೀರ್ಪುಗಳನ್ನು ತಳ್ಳಿಹಾಕಿದೆ. ಕೇವಲ 20 ರೂಪಾಯಿಗಾಗಿ ಈ ಇಬ್ಬರು ನೌಕರರು ಕಳೆದ ಮೂರು ದಶಕಗಳಿಂದ ಅನುಭವಿಸಿದ ಮಾನಸಿಕ ಯಾತನೆ ಹಾಗೂ ಸಾಮಾಜಿಕ ಕಳಂಕಕ್ಕೆ ಈ ತೀರ್ಪು ಮುಕ್ತಿ ನೀಡಿದೆ. ಭ್ರಷ್ಟಾಚಾರದ ವಿರುದ್ಧದ ತನಿಖೆಯಲ್ಲಿ ಕೇವಲ ಹಣ ಸಿಕ್ಕಿದ ಮಾತ್ರಕ್ಕೆ ಅಪರಾಧಿಯೆಂದು ಬಿಂಬಿಸಬಾರದು, ಬದಲಿಗೆ ಲಂಚದ ಬೇಡಿಕೆ ಇತ್ತೇ ಎಂಬುದೇ ಮುಖ್ಯ ಎಂದು ಈ ಮಹತ್ವದ ತೀರ್ಪು ಮತ್ತೊಮ್ಮೆ ಸಾಬೀತುಪಡಿಸಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!