BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Rail Track land Slide ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ,ಎಡಕುಮಾರಿ ಬಳಿ ಭೂಕುಸಿತ , ರೈಲು ಸಂಚಾರ ಸ್ಥಗಿತ


ಮಂಗಳೂರು, ಆಗಸ್ಟ್ 02 : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಮೈಸೂರು ವಿಭಾಗದ ಎಡಕುಮಾರಿ–ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ರೈಲು ಹಳಿಯಲ್ಲಿ ಶನಿವಾರ ರಾತ್ರಿ ಸುಮಾರು 8.45ಕ್ಕೆ ಭೂಕುಸಿತ ಸಂಭವಿಸಿದೆ.

ಪರಿಣಾಮ ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಭಾಗದ ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಏಳು ರೈಲುಗಳನ್ನು ಭಾಗಶಃ ರದ್ದುಗೊಳಿಸಿ ತಾತ್ಕಾಲಿಕವಾಗಿ ಕಡಿಮೆ ದೂರಕ್ಕೆ ಸಂಚಾರ ನಡೆಸಲು ನೈಋತ್ಯ ರೈಲ್ವೆ (South Western Railway) ಆದೇಶಿಸಿದೆ.

ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಾಡಿ ಅವರು ಭಾನುವಾರ ಬೆಳಗ್ಗೆ ಬುಲೆಟಿನ್ ಬಿಡುಗಡೆ ಮಾಡಿ ಮಾಹಿತಿ ನೀಡಿದ್ದಾರೆ.ಹಾಸನ-ಮುರುಡೇಶ್ವರ ಸಂಚಾರ ರದ್ದು: 16585 SMVT ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ ಹಾಸನದಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದ್ದು, ಹಾಸನ–ಮುರುಡೇಶ್ವರ ನಡುವಿನ ಸಂಚಾರ ರದ್ದಾಗಿದೆ.16511 ಕೆಎಸ್‌ಆರ್ ಬೆಂಗಳೂರು–ಕೊಝಿಕೋಡ್ ಎಕ್ಸ್‌ಪ್ರೆಸ್ ಹಾಸನದಲ್ಲೇ ಸ್ಥಗಿತಗೊಳ್ಳಲಿದ್ದು, ಹಾಸನ–ಕೋಝಿಕೋಡ್ ನಡುವೆ ಸಂಚಾರ ಇರುವುದಿಲ್ಲ. 17377 ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಕೂಡ ಹಾಸನದಲ್ಲೇ ಪ್ರಯಾಣ ಅಂತ್ಯಗೊಳಿಸಲಿದ್ದು, ಹಾಸನ–ಮಂಗಳೂರು ಸೆಂಟ್ರಲ್ ನಡುವಿನ ಸೇವೆ ರದ್ದಾಗಿದೆ.


ಅದೇ ರೀತಿ 16595 ಕೆಎಸ್‌ಆರ್ ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್ ಸಕಲೇಶಪುರದಲ್ಲೇ ಕೊನೆಗೊಳ್ಳಲಿದ್ದು, ಸಕಲೇಶಪುರ–ಕಾರವಾರ ನಡುವಿನ ಸೇವೆ ಸ್ಥಗಿತಗೊಂಡಿದೆ.ಹಿಂತಿರುಗುವ ರೈಲುಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. 16586 ಮುರುಡೇಶ್ವರ–SMVT ಬೆಂಗಳೂರು ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಕೊನೆಗೊಳ್ಳಲಿದೆ. 16512 ಕೊಝಿಕೋಡ್ –ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಕಬಕ ಪುತ್ತೂರಿನವರೆಗೆ ಮಾತ್ರ ಸಂಚರಿಸಲಿದ್ದು, ಅಲ್ಲಿಂದ ಬೆಂಗಳೂರಿನವರೆಗೆ ಭಾಗಶಃ ರದ್ದಾಗಿದೆ. 17378 ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್‌ಪ್ರೆಸ್ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಸ್ಥಗಿತಗೊಳ್ಳಲಿದ್ದು, ಅಲ್ಲಿಂದ ವಿಜಯಪುರದವರೆಗಿನ ಸೇವೆ ರದ್ದಾಗಿದೆ.

ಭಾರೀ ಮಳೆಯಿಂದಾಗಿ ಈ ಪ್ರದೇಶಗಳಲ್ಲಿ ಭೂಕುಸಿತ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಹಳಿ ಪುನಃಸ್ಥಾಪನೆ ಕಾರ್ಯ ಸವಾಲಿನದ್ದಾಗಿದೆ. ಹಳಿ ಮೇಲಿನ ಮಣ್ಣು ಮತ್ತು ಬಂಡೆಗಳನ್ನು ತೆರವುಗೊಳಿಸಲು ಹೆಚ್ಚುವರಿ ಹಿಟಾಚಿ ಯಂತ್ರಗಳು ಹಾಗೂ ಅಗತ್ಯ ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ರೈಲ್ವೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ ರೈಲು ಸಂಚಾರವನ್ನು ಶೀಘ್ರದಲ್ಲಿ ಪುನಃರಾರಂಭಿಸಲು ಪ್ರಯತ್ನಿಸಲಾಗುತ್ತಿದೆ.

ಪ್ರಯಾಣಿಕರು ರೈಲುಗಳ ಸಂಚಾರಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಯನ್ನು ರೈಲ್ವೆಯ ಅಧಿಕೃತ ಪ್ರಕಟಣೆಗಳು ಮತ್ತು ಸಹಾಯವಾಣಿ ಮೂಲಕ ಪಡೆದು ಪ್ರಯಾಣ ಕೈಗೊಳ್ಳುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!