ಪುತ್ತೂರು,ಆಗಸ್ಟ್14 : ಮಂತ್ರಾಲಯದಿಂದ ವಾಪಸ್ ಬರುತ್ತಿದ್ದ ಪುತ್ತೂರು ಮೂಲದ ಉದ್ಯಮಿಯೊಬ್ಬರು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಬೆಳಿಯೂರುಕಟ್ಟೆ ಮೂಲದ ಹಾಗೂ ಸದ್ಯ ಮಂಗಳೂರಿನಲ್ಲಿ ವಾಸವಾಗಿದ್ದ ಸಂದೀಪ್ ಶೆಟ್ಟಿ (44) ಎಂದು ಗುರುತಿಸಲಾಗಿದೆ.
ಸಂದೀಪ್ ಶೆಟ್ಟಿಯವರು ಆ.9ರಂದು ಮಂಗಳೂರಿನಿಂದ ಬಸ್ ಮೂಲಕ ಮಂತ್ರಾಲಯಕ್ಕೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವೇಳೆ ಆ.10ರ ರಾತ್ರಿ ಬಸ್ ಬಳ್ಳಾರಿಯ ಎಪಿಎಂಸಿ ಬಸ್ ನಿಲ್ದಾಣದಲ್ಲಿ ತಂಗಿತ್ತು. ರಾತ್ರಿ ಸುಮಾರು 2.30ರ ವೇಳೆಗೆ ಬಸ್‌ನಿಂದ ಇಳಿದ ಸಂದೀಪ್ ಶೆಟ್ಟಿ ಅವರು ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿದ್ದರು ಎನ್ನಲಾಗಿದೆ. ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಅವರಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಗಮನಕ್ಕೆ ಬಂದ ಬಳಿಕ ಇತರ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ ನಿಲ್ದಾಣದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮೃತರ ಕುಟುಂಬಕ್ಕೆ ಮಾಹಿತಿ ನೀಡಲು ಅವರ ಪುತ್ರನ ಮೊಬೈಲ್‌ಗೆ ಸಂದೇಶ ಕಳುಹಿಸಲಾಗಿತ್ತು.
ಆದರೆ, ಪಿಯುಸಿ ವಿದ್ಯಾರ್ಥಿಯಾಗಿರುವ ಪುತ್ರ ದೃಪದ್ ಕಾಲೇಜಿನ ಅವಧಿಯಲ್ಲಿ ಮೊಬೈಲ್‌ನ್ನು ಸೈಲೆಂಟ್ ಮೋಡ್‌ನಲ್ಲಿ ಇಟ್ಟಿದ್ದರಿಂದ ತಕ್ಷಣ ಸಂದೇಶ ಗಮನಕ್ಕೆ ಬಂದಿರಲಿಲ್ಲ. ಮಧ್ಯಾಹ್ನದ ಬಳಿಕ ಮೊಬೈಲ್ ಪರಿಶೀಲಿಸಿದಾಗ ಪೊಲೀಸರ ಸಂದೇಶ ಕಂಡುಬಂದಿದ್ದು, ಕೂಡಲೇ ತಮ್ಮ ತಾಯಿಯ ಸೋದರ ಮಾವ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಜಗದೀಶ್ ಶೆಟ್ಟಿ, ಮೃತರ ಪತ್ನಿ ಹಾಗೂ ಪುತ್ರ ಆ.11ರಂದು ಸಂಜೆ ಬಳ್ಳಾರಿಗೆ ತೆರಳಿದ್ದಾರೆ. ಮೃತದೇಹವನ್ನು ಊರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಬೆಳಿಯೂರುಕಟ್ಟೆಯ ನಾರಾಯಣ ಶೆಟ್ಟಿ ಮತ್ತು ಕುಮುದಾ ದಂಪತಿಯ ಪುತ್ರರಾಗಿದ್ದ ಸಂದೀಪ್ ಶೆಟ್ಟಿಯವರು ಈ ಹಿಂದೆ ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರಿಗೆ ತೆರಳಿದ ಬಳಿಕ ಆರಂಭದಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದ ಅವರು, ನಂತರ ಸ್ವಂತ ಉದ್ಯಮ ಆರಂಭಿಸಿದ್ದರು.
ಕೆಲ ವರ್ಷಗಳ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಇತ್ತೀಚೆಗೆ ಊರಿಗೆ ಮರಳಿದ್ದರು. ಮತ್ತೆ ಆ.26ರಂದು ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಸಂದೀಪ್ ಶೆಟ್ಟಿಯವರ ಬದುಕಿನಲ್ಲಿ ವಿಧಿಯಾಟವೇ ಬೇರೆಯಾಗಿದ್ದು, ಮಂತ್ರಾಲಯ ಪ್ರವಾಸದಿಂದ ವಾಪಸ್ ಬರುತ್ತಿದ್ದ ವೇಳೆ ಬಳ್ಳಾರಿಯಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೃತರು ಪತ್ನಿ ವಿದ್ಯಾ ಶೆಟ್ಟಿ, ಪುತ್ರ ದೃಪದ್, ತಾಯಿ ಕುಮುದಾ ಹಾಗೂ ಸಹೋದರ ದಿಲೀಪ್ ಅವರನ್ನು ಅಗಲಿದ್ದಾರೆ.