BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Ponzi Scheme 2,110 ಕೋಟಿ ರೂ. ಪೋಂಜಿ ಹಗರಣ ; ಬೆಳಗಾವಿಯ 'ಶಿವಂ ಅಸೋಸಿಯೇಟ್ಸ್' ಮುಖ್ಯಸ್ಥ ಆರೋಪಿ ಶಿವಾನಂದ ನೀಲಣ್ಣವರ್ ನನ್ನು ಮಂಗಳೂರು ಕೋರ್ಟಿಗೆ ಹಾಜರುಪಡಿಸಿದ ಇ.ಡಿ.


ಮಂಗಳೂರು,ಆಗಸ್ಟ್ 24: ಸುಮಾರು 2,110 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಂಚನೆ ಎಸಗಿರುವ ಬಹುರಾಜ್ಯ ಬಹುಕೋಟಿ ಪೋಂಜಿ ಹಗರಣ (Ponzi Scheme) ಕ್ಕೆ ಸಂಬಂಧಿಸಿದಂತೆ, ಬೆಳಗಾವಿಯ 'ಶಿವಂ ಅಸೋಸಿಯೇಟ್ಸ್' ಸಂಸ್ಥೆಯ ಮುಖ್ಯಸ್ಥ ಶಿವಾನಂದ ಸಿದ್ದಪ್ಪ ನೀಲಣ್ಣವರ್‌ನನ್ನು ಜಾರಿ ನಿರ್ದೇಶನಾಲಯದ (ED) ಮಂಗಳೂರು ಉಪ ವಲಯ ಕಚೇರಿ ಅಧಿಕಾರಿಗಳು ಬಂಧಿಸಿದ್ದು ಸೋಮವಾರ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. 

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿಯಲ್ಲಿ ಆಗಸ್ಟ್ 13ರಂದು ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಇಂದು ಆತನನ್ನು ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ಆಗಸ್ಟ್ 24ರವರೆಗೆ ಒಟ್ಟು 12 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ್ ನೀಲಣ್ಣನವರ್ ವಿರುದ್ಧ 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2004ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಎಫ್‌ಐಆರ್ ಅನ್ನು ಆಧರಿಸಿ ಜಾರಿ ನಿರ್ದೇಶನಾಲಯವು (ಇ.ಡಿ) ಈ ಬಹುಕೋಟಿ ಹಗರಣದ ತನಿಖೆಯನ್ನು ಚುರುಕುಗೊಳಿಸಿತ್ತು. 

  ಏನಿದು ಪೋಂಜಿ ಹಗರಣ? 

ಪೋಂಜಿ ಹಗರಣ (Ponzi Scheme) ಎನ್ನುವುದು ಹೂಡಿಕೆದಾರರಿಗೆ ಕಡಿಮೆ ಅಪಾಯದಲ್ಲಿ ಅಲ್ಪಾವಧಿಯಲ್ಲಿ ಅತಿ ಹೆಚ್ಚಿನ ಲಾಭದ ಆಮಿಷವೊಡ್ಡಿ, ಹೊಸ ಹೂಡಿಕೆದಾರರ ಹಣದಿಂದ ಹಳೆಯ ಹೂಡಿಕೆದಾರರಿಗೆ ಲಾಭಾಂಶವನ್ನು ನೀಡುತ್ತಾ ಹೋಗುವ ಒಂದು ಮೋಸದ ಹಣಕಾಸು ಜಾಲವಾಗಿದೆ.

ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ, ಛತ್ತೀಸ್‌ಗಢ ಸಹಿತ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿತ್ತು. ಹೂಡಿಕೆದಾರರಿಂದ 2,110.97 ಕೋಟಿ ರೂ. ಸಂಗ್ರಹಿಸಿದ್ದರೂ, ಅದರ ಒಂದು ಭಾಗದಷ್ಟನ್ನು ಮಾತ್ರ ಹೂಡಿಕೆದಾರರಿಗೆ ಮರುಪಾವತಿಸಿತ್ತು.  2019ರಿಂದ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ನಷ್ಟ ಅನುಭವಿಸಿರುವುದು ಕೂಡ ತನಿಖೆಯಲ್ಲಿ ಪತ್ತೆಯಾಗಿದೆ. ಆದರೂ ಕೂಡ ಇದನ್ನು ಮರೆಮಾಚಿ ಮಾರುಕಟ್ಟೆಯಲ್ಲಿ ಸಂಸ್ಥೆಯ ಮೇಲಿನ ವಿಶ್ವಾಸವನ್ನು ಉಳಿಸಿಕೊಳ್ಳುವ ಉದ್ದೇಶದಿಂದ, ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಹಿಂದಿನ ಹೂಡಿಕೆದಾರರಿಗೆ ನೀಡಬೇಕಿದ್ದ ಬಡ್ಡಿ ಪಾವತಿಗೆ ನೇರವಾಗಿ ವರ್ಗಾಯಿಸಲಾಗುತ್ತಿತ್ತು. ಸಂಸ್ಥೆಯು ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ವಿವಿಧ ವೈಯಕ್ತಿಕ ಬ್ಯಾಂಕ್ ಖಾತೆಗಳು, ಕುಟುಂಬ ಸದಸ್ಯರ ಖಾತೆಗಳು, ಶಿವಂ ಸೇವಾ (ಒಪಿಸಿ) ಪ್ರೈ.ಲಿ. ಮತ್ತು ಶಿವಂ ಪ್ರೊಡಕ್ಷನ್ಸ್ ಸಹಿತ ಇತರ ಸಂಸ್ಥೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿ ಬಳಕೆ ಮಾಡಲಾಗುತ್ತಿತ್ತು. ಅಲ್ಲದೆ ಐಷಾರಾಮಿ ವಾಹನಗಳ ಖರೀದಿ, ದುಬಾರಿ ಬಂಗಲೆಗಳ ನಿರ್ಮಾಣ, ಬೇನಾಮಿ ಪಾಲುದಾರರ ಹೆಸರಿನಲ್ಲಿ ಆಸ್ತಿಗಳ ಖರೀದಿಗೂ ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!