ನವದೆಹಲಿ, ಆಗಸ್ಟ್ 06 : ಇನ್ನು ಮುಂದೆ ಗೂಗಲ್‌ಪೇ, ಫೋನ್‌ಪೇ ಮತ್ತಿತರ ಆನ್‌ಲೈನ್ ಪೇಮೆಂಟ್ ಮಾಡಿದ್ರೆ ಶುಲ್ಕ ತೆರಬೇಕಾಗಿದೆ. 2,000 ರೂ. ಗಿಂತಲೂ ಹೆಚ್ಚಿನ UPI ಪಾವತಿಗೆ ಶುಲ್ಕ ವಿಧಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಏಕೀಕೃತ ಪಾವತಿ ವ್ಯವಸ್ಥೆ (UPI) ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೇಲೆ ಭವಿಷ್ಯದಲ್ಲಿ ಶುಲ್ಕ ವಿಧಿಸಲು ಕೇಂದ್ರ ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರ ನೀಡುವ ಮಹತ್ವದ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ.
ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ, 2026 (Taxation and Other Laws (Amendment) Bill, 2026.) ಅನ್ನು ಧ್ವನಿ ಮತದ ಮೂಲಕ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಸದನದಲ್ಲಿ ಗದ್ದಲದ ನಡುವೆಯೇ ಮಧ್ಯಾಹ್ನ 2 ಗಂಟೆಗೆ ಕಲಾಪ ಪುನರಾರಂಭವಾದ ಬಳಿಕ ಯಾವುದೇ ಚರ್ಚೆಯಿಲ್ಲದೇ ಮಸೂದೆಗೆ ಅನುಮೋದನೆ ದೊರೆಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರ ಈ ಮಸೂದೆಯನ್ನು ಮಂಡಿಸಿದ್ದರು.
ಈ ಮಸೂದೆಯು 2007ರ ಪಾವತಿ ಮತ್ತು ಸೆಟ್ಲ್‌ಮೆಂಟ್ ವ್ಯವಸ್ಥೆಗಳ ಕಾಯ್ದೆಯ (Payment and Settlement Systems Act, 2007), ಸೆಕ್ಷನ್ 10ಎ ನ ತಿದ್ದುಪಡಿಯಾಗಿದೆ.
ಭಾರತದಲ್ಲಿ ಡಿಜಿಟಲ್ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಅವಕಾಶ ಇಲ್ಲದಿರುವುದರಿಂದ ಕಂಪನಿಗಳು ಬೆಳವಣಿಗೆ ಹೊಂದಲು ಕಷ್ಟಕರವಾದ ವಾತಾವರಣವಿದೆ ಎಂದು ಕೆಲವು ಉದ್ಯಮಿಗಳು ಹಿಂದಿನಿಂದಲೂ ವಾದಿಸುತ್ತಿದ್ದರು. ಇದೀಗ ಲೋಕಸಭೆಯಲ್ಲಿ ಅಂಗೀಕಾರ ಆಗಿರುವ ತಿದ್ದುಪಡಿ ಮಸೂದೆಯು ಡಿಜಿಟಲ್ ಪಾವತಿಗಳ ಮೇಲೆ ಎಂಡಿಆರ್ ವಿಧಿಸಲು ಅವಕಾಶ ಕಲ್ಪಿಸಿದೆ. 2,000 ರೂ.ಗಿಂತಲೂ ಹೆಚ್ಚು ಮೊತ್ತದ ವಹಿವಾಟಿನ ಮೇಲೆ ಶೇ 0.3 ರಿಂದ ಶೇ 0.5 ರ ವರೆಗೆ ಎಂಡಿಆರ್ ವಿಧಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ. ಯಾವ ಡಿಜಿಟಲ್ ಪಾವತಿ ವಿಧಾನಗಳಿಗೆ ಶುಲ್ಕ ವಿಧಿಸಬಹುದು ಎಂಬುದನ್ನು ಕೇಂದ್ರ ಸರ್ಕಾರವು ಮುಂದಿನ ದಿನಗಳಲ್ಲಿ ಅಧಿಸೂಚನೆ (Notification) ಮೂಲಕ ನಿರ್ಧರಿಸಲಿದೆ.