ನೋಯ್ಡಾ, ಆಗಸ್ಟ್ 04 : ನೋಯ್ಡಾದ ಎಲೆಕ್ಟ್ರಾನಿಕ್ ಚಿಪ್ ಘಟಕದಲ್ಲಿ ಭಾರಿಬೆಂಕಿ ಅವಘಡ ಸಂಭವಿಸಿದ್ದು ಈ ಸಂದರ್ಭ ಕಾರ್ಯಾಚರಣೆ ಮಾಡುತ್ತಿದ್ದ ಅಗ್ನಿಶಾಮಕದಳದ ಇಬ್ಬರು ಅಗ್ನಿಶಾಮಕ ಸಿಬ್ಬಂದಿಸಾವನ್ನಪ್ಪಿದರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ (ಆಗಸ್ಟ್ 3) ತಡರಾತ್ರಿ ಇಕೋಟೆಕ್-3 ಕೈಗಾರಿಕಾ ಪ್ರದೇಶದಲ್ಲಿರುವ ಐಎಲ್‌ಜಿಐಎಂ (ILGIM) ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕನಿಷ್ಠ ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು. ಕಾರ್ಯಾಚರಣೆ ನಡೆಸುತ್ತಿದ್ದಾಗ ಫ್ಯಾಕ್ಟರಿಯ ಗೋಡೆ ಮತ್ತು ಕಬ್ಬಿಣದ ತೊಲೆ ಇದ್ದಕ್ಕಿದ್ದಂತೆ ಒಂದು ಅಗ್ನಿಶಾಮಕ ವಾಹನದ ಮೇಲೆ ಕುಸಿದುಬಿದ್ದ ಪರಿಣಾಮ ಅಗ್ನಿಶಾಮಕ ಸಿಬ್ಬಂದಿಗಳಲ್ಲಿ ಐವರು ಗಂಭೀರ ಗಾಯಗೊಂಡರು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಗಾಯಗೊಂಡ ಐವರು ಅಗ್ನಿಶಾಮಕ ಸಿಬ್ಬಂದಿಯನ್ನು ತಕ್ಷಣ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ರೋಹಿತ್ ಯಾದವ್ ಮತ್ತು ತೀರ್ಥಪಾಲ್ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡಿರುವ ಇತರ ಮೂವರು ಅಗ್ನಿಶಾಮಕ ಸಿಬ್ಬಂದಿಯಾದ ರಾಜ್‌ಪಾಲ್ ಸಿಂಗ್, ಮನೀಶ್ ಕುಮಾರ್ ಮತ್ತು ಅಮಿತ್ ಕುಮಾರ್ ಅವರ ಸ್ಥಿತಿ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೋಯ್ಡಾ ಎಲೆಕ್ಟ್ರಾನಿಕ್ ಚಿಪ್ ಘಟಕದಲ್ಲಿ ಭಾರಿಬೆಂಕಿ ಅವಘಡ, ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಮೃತ್ಯು, ಮೂವರು ಗಂಭೀರ..!
