ಮಂಗಳೂರು,ಆಗಸ್ಟ್15: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ), ಸುರತ್ಕಲ್‌ನಲ್ಲಿ “ವಿಕಸಿತ ಭಾರತ@2047ಗಾಗಿ ಯುವಶಕ್ತಿ” ಎಂಬ ರಾಷ್ಟ್ರೀಯ ಥೀಮ್ ಹಾಗೂ ವಂದೇ ಮಾತರಂ 150ನೇ ವರ್ಷದ ಸಂಭ್ರಮದಡಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಸಿಟಿಓ ಡಾ. ಮೋಹನ್ ಲಾಲ್ ಮೀನಾ ಅವರು ನಿರ್ದೇಶಕ ಪ್ರೊ. ಬಿ. ರವಿ ಅವರನ್ನು ಸ್ವಾಗತಿಸಿದರು. ನಂತರ ನಿರ್ದೇಶಕರು ಎನ್‌ಸಿಸಿ ಪಡೆಯ ಪರಿಶೀಲನೆ ನಡೆಸಿ ರಾಷ್ಟ್ರೀಯ ಧ್ವಜವನ್ನು ಹಾರಿಸಿದರು. ಎನ್‌ಸಿಸಿ ವಿದ್ಯಾರ್ಥಿಗಳು, ಕನ್ನಡ ಮಾಧ್ಯಮ ಶಾಲಾ ಮಕ್ಕಳು ಹಾಗೂ ಸಂಸ್ಥೆಯ ಭದ್ರತಾ ಘಟಕದವರಿಂದ ಆಕರ್ಷಕ ಪಥಸಂಚಲನ ನಡೆಯಿತು. ಶ್ರೇಷ್ಠ ಸಾಧನೆಗೈದ ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಈ ವೇಳೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ನಿರ್ದೇಶಕ ಪ್ರೊ. ಸುಬಾಷ್ ಸಿ. ಯಾರಗಲ್ ಅವರು ಭಾರತದ ಮೂರು ಐತಿಹಾಸಿಕ ಹೋರಾಟಗಳಾದ ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಸ್ವಾವಲಂಬನೆ ಮತ್ತು ಪ್ರಸ್ತುತ ಎದುರಾಗಿರುವ ಬೌದ್ಧಿಕ ಸ್ವಾತಂತ್ರ್ಯದ ಕುರಿತು ವಿವರಿಸಿದರು.
ಇಂದು ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಜೀವನದ ಬಗ್ಗೆ ನಮ್ಮ ಅಭಿಪ್ರಾಯಗಳು ನಿಜವಾಗಿಯೂ ಸ್ವತಂತ್ರವಾಗಿವೆಯೇ ಅಥವಾ ಸಾಮಾಜಿಕ ಮಾಧ್ಯಮದ ಯೋಜಿತ ಮಾಹಿತಿಯಿಂದ ಪ್ರಭಾವಿತವಾಗಿವೆಯೇ ಎಂದು ನಾವು ಆತ್ಮಪರಿಶೀಲನೆ ಮಾಡಿಕೊಳ್ಳಬೇಕು" ಎಂದರು.
ಕೃತಕ ಬುದ್ಧಿಮತ್ತೆಯ (AI) ಈ ಯುಗದಲ್ಲಿ ಕುತೂಹಲ, ಸೃಜನಶೀಲತೆ, ಸಹಾನುಭೂತಿ, ನೈತಿಕತೆ ಮತ್ತು ಅಂತರಜ್ಞಾನದಂತಹ ಮಾನವ ಮೌಲ್ಯಗಳನ್ನು ನಾವು ಉಳಿಸಿ ಬಲಪಡಿಸಬೇಕು. ರಾಷ್ಟ್ರ ನಿರ್ಮಾಣವು ನಮ್ಮ ಕಚೇರಿ, ಪ್ರಯೋಗಾಲಯ, ವಿಭಾಗ ಮತ್ತು ಮನೆ/ಹಾಸ್ಟೆಲ್‌ಗಳಿಂದಲೇ ಆರಂಭವಾಗುತ್ತದೆ ಎಂದು ಅವರು ಹೇಳಿದರು. ಎನ್‌ಐಟಿಕೆ ಹೊಸ ಪದವಿ ಪಠ್ಯಕ್ರಮವನ್ನು ಈ ದೃಷ್ಟಿಯಿಂದ ರೂಪಿಸಿದೆ ಎಂದು ಅವರು ತಿಳಿಸಿದರು. ಶಿಕ್ಷಕರು ನೈತಿಕತೆ, ಪ್ರಾಮಾಣಿಕತೆ ಮತ್ತು ಅಚ್ಚುಕಟ್ಟಿನತೆ ಉನ್ನತ ಮಾನದಂಡಗಳನ್ನು ಪಾಲಿಸಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಮಾದರಿಯಾಗಬೇಕು ಎಂದು ಅವರು ಕರೆ ನೀಡಿದರು.
ಕುಲಸಚಿವರು, ಸಂಸ್ಥೆಯ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಎನ್‌ಐಟಿಕೆ ಕ್ಯಾಂಪಸ್‌ನಾದ್ಯಂತ 'ಹರ್ ಘರ್ ತಿರಂಗಾ' ಅಭಿಯಾನವನ್ನು ಯಶಸ್ವಿಯಾಗಿ ಆಚರಿಸಲಾಯಿತು.

