ಕಾಠ್ಮಂಡು/ಬೀಜಿಂಗ್, ಆಗಸ್ಟ್ 27: ನೇಪಾಳ ಹಾಗೂ ಟಿಬೆಟ್ ಗಡಿ ಭಾಗದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಸಂಭವಿಸಿದ ಅನಿರೀಕ್ಷಿತ ಹಾಗೂ ಭೀಕರ ಜಲಪ್ರಳಯದಿಂದಾಗಿ (Flash Flood) ಇಡೀ ಪ್ರದೇಶವೇ ಜಲಸಮಾಧಿಯಾಗಿದೆ. ಈ ದುರಂತದಲ್ಲಿ ಕನಿಷ್ಠ 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳುತ್ತಿದ್ದ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
30 ಅಡಿ ಏರಿಕೆಯಾದ ನೀರಿನ ಮಟ್ಟ, ಸಂಪೂರ್ಣ ನಾಶವಾದ ಜನವಸತಿ
ನದಿಗಳಲ್ಲಿ ನೀರಿನ ಮಟ್ಟ ದಿಢೀರನೆ ಬರೋಬ್ಬರಿ 30 ಅಡಿಗಳಷ್ಟು ಏರಿಕೆಯಾದ ಕಾರಣ, ನದಿ ಪಾತ್ರದ ಜನವಸತಿಗಳು, ಜಲವಿದ್ಯುತ್ ಘಟಕಗಳು ಹಾಗೂ ಯಾತ್ರಾ ಮಾರ್ಗಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ. ಪ್ರವಾಹದ ತೀವ್ರತೆ ಎಷ್ಟಿತ್ತೆಂದರೆ, ಸುಮಾರು 33 ಮೃತದೇಹಗಳು ಘಟನಾ ಸ್ಥಳದಿಂದ ಬರೋಬ್ಬರಿ 150 ಕಿ.ಮೀ ದೂರದ ಚಿತ್ವಾನ್‌ನಲ್ಲಿ ಪತ್ತೆಯಾಗಿವೆ. ರಸುವಾ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಸೇನಾ ಬ್ಯಾರಕ್‌ಗಳು ಕೊಚ್ಚಿಹೋಗಿದ್ದು, 29 ಪೊಲೀಸರು ಹಾಗೂ 44 ಸೈನಿಕರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಸಂಸತ್ತಿಗೆ ತಿಳಿಸಿದ್ದಾರೆ.
ನೇಪಾಳ ಪೊಲೀಸರ ಅಧಿಕೃತ ಮಾಹಿತಿಯ ಪ್ರಕಾರ, ದೇಶದಲ್ಲಿ 157 ಮಂದಿ ಮೃತಪಟ್ಟಿದ್ದರೆ, ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ 3 ಸಾವುಗಳು ವರದಿಯಾಗಿವೆ.
ನೇಪಾಳದಲ್ಲಿ 28 ದೇಶಗಳ 466 ವಿದೇಶಿಯರು ಹಾಗೂ 113 ನೇಪಾಳಿಗಳು ಸೇರಿದಂತೆ ಒಟ್ಟು 579 ಮಂದಿ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರಲ್ಲಿ ಕನಿಷ್ಠ 133 ಭಾರತೀಯರು ಹಾಗೂ 37 ಅನಿವಾಸಿ ಭಾರತೀಯರು (NRI) ಸೇರಿದ್ದಾರೆ.
ಇತರೆ ದೇಶಗಳಾದ 54 ಅಮೆರಿಕನ್ನರು, 34 ಆಸ್ಟ್ರೇಲಿಯನ್ನರು, 33 ಬ್ರಿಟಿಷರು, 24 ಕೆನಡಿಯನ್ನರು, 19 ಮಲೇಷಿಯನ್ನರು ಮತ್ತು 8 ಕೊರಿಯನ್ನರ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಟಿಬೆಟ್ ಗಡಿ ಭಾಗದಲ್ಲಿ ಪ್ರತ್ಯೇಕವಾಗಿ ಸುಮಾರು 265 ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಸಂಭವಿಸಿದ ವೇಳೆ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳುತ್ತಿದ್ದ ಭಾರತೀಯರು ಸೇರಿದಂತೆ ಸುಮಾರು 400 ಯಾತ್ರಿಕರು ಗಡಿ ದಾಟಲು ಸಜ್ಜಾಗಿದ್ದರು ಅಥವಾ ಆ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅಂದದಲಿಸಲಾಗಿದೆ.
ಭಾರಿ ಆರ್ಥಿಕ ನಷ್ಟ ಹಾಗೂ ಮೂಲಸೌಕರ್ಯ ಧ್ವಂಸ
ನೇಪಾಳ ಸರ್ಕಾರದ ಪ್ರಾಥಮಿಕ ಅಂದಾಜಿನ ಪ್ರಕಾರ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ
9ಕ್ಕೂ ಹೆಚ್ಚು ಸೇತುವೆಗಳು ಮತ್ತು ಸುಮಾರು 40 ಕಿ.ಮೀ ರಸ್ತೆಗಳು ಸಂಪೂರ್ಣ ಕೊಚ್ಚಿಹೋಗಿವೆ.
20 ಮೆಗಾವ್ಯಾಟ್ ಸಾಮರ್ಥ್ಯದ ಲಾಂಗ್‌ಟಾಂಗ್ ಖೋಲಾ ಜಲವಿದ್ಯುತ್ ಯೋಜನೆ ಸೇರಿದಂತೆ ಒಟ್ಟು 13 ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ.
ಸುಮಾರು 200 ಟ್ರಕ್‌ಗಳು ಪ್ರವಾಹದ ಪಾಲಾಗಿವೆ. ಗಡಿ ಭದ್ರತಾ ಠಾಣೆಗಳು, ಕಸ್ಟಮ್ಸ್ ಕಚೇರಿಗಳು ಹಾಗೂ ಬ್ಯಾಂಕುಗಳು ಜಲಾವೃತಗೊಂಡಿವೆ.
ರಕ್ಷಣಾ ಕಾರ್ಯಾಚರಣೆ ಮತ್ತು ಸರ್ಕಾರದ ಕ್ರಮಗಳು
ಪ್ರತಿಕೂಲ ಹವಾಮಾನ ಮತ್ತು ರಸ್ತೆ ಸಂಪರ್ಕ ಕಡಿತದ ನಡುವೆಯೂ ನೇಪಾಳ ಸೇನೆ, ಪೊಲೀಸ್ ಹಾಗೂ ಸಶಸ್ತ್ರ ಪಡೆಗಳು ಹೆಲಿಕಾಪ್ಟರ್, ಡ್ರೋನ್ ಮತ್ತು ಬೋಟ್‌ಗಳ ನೆರವಿನಿಂದ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜನತೆ ಸಂಯಮ ಮತ್ತು ಒಗ್ಗಟ್ಟು ಪ್ರದರ್ಶಿಸಬೇಕೆಂದು ನೇಪಾಳ ಪ್ರಧಾನಿ ಬಾಲೆನ್ ಶಾ ಮನವಿ ಮಾಡಿದ್ದಾರೆ.
ಗಂಭೀರ ಪರಿಸ್ಥಿತಿಯನ್ನು ಪರಿಗಣಿಸಿ ನೇಪಾಳ ಸರ್ಕಾರವು ಹೆಚ್ಚು ಹಾನಿಗೊಳಗಾದ ಪ್ರದೇಶಗಳನ್ನು ಮುಂದಿನ 3 ತಿಂಗಳುಗಳ ಕಾಲ ‘ವಿಪತ್ತು ಪೀಡಿತ ವಲಯ’ ಎಂದು ಘೋಷಿಸಿದ್ದು, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲು ಆದೇಶಿಸಿದೆ. ಅತ್ತ ಟಿಬೆಟ್ ಗಡಿಯಲ್ಲಿ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ನಾಪತ್ತೆಯಾದವರ ಪತ್ತೆಗೆ ಸರ್ವಪ್ರಯತ್ನ ನಡೆಸುವಂತೆ ಚೀನಾ ಅಧ್ಯಕ್ಷ ಷಿಜಿನ್‌ಪಿಂಗ್ ಸೂಚನೆ ನೀಡಿದ್ದಾರೆ.


