Nandi Hills ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್ ಓಟದ ವೇಳೆ ಕುಸಿದು ಬಿದ್ದು ಕ್ರೀಡಾಪಟು ಮೃತ್ಯು..!
ಸುದ್ದಿವಾಣಿ
8/09/2026 05:03:00 PM
ಚಿಕ್ಕಬಳ್ಳಾಪುರ, ಆಗಸ್ಟ್ 09: 31 ವರ್ಷದ ಕ್ರೀಡಾಪಟುವೊಬ್ಬರು ವಿಶ್ವವಿಖ್ಯಾತ ನಂದಿಬೆಟ್ಟದ ತಪ್ಪಲಿನಲ್ಲಿ ಭಾನುವಾರ ನಡೆದ 2ನೇ ಆವೃತ್ತಿಯ ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್ ಓಟದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಈ ಎರಡನೇ ಆವೃತ್ತಿಯ ಮಾನ್ಸೂನ್ ಮ್ಯಾರಥಾನ್‌ನಲ್ಲಿ 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ (31) ಮೃತ ಕ್ರೀಡಾಪಟುವಾಗಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನ ಖಾಸಗಿ ಕಂಪನಿಯೊಂದರಲ್ಲಿ ಈತ ಉದ್ಯೋಗಿಯಾಗಿದ್ದು 21 ಕಿಲೋಮೀಟರ್ ವಿಭಾಗದ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು. ನಂದಿಗಿರಿಧಾಮದ ಬೆಟ್ಟದ ಅರ್ಧ ಭಾಗದಷ್ಟು ಓಟವನ್ನು ಯಶಸ್ವಿಯಾಗಿ ಮುಗಿಸಿದ್ದ ಅವರು, ಮುಂದುವರಿಯುತ್ತಿದ್ದಾಗ ಹಠಾತ್ತನೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮ್ಯಾರಥಾನ್ ಸ್ವಯಂಸೇವಕರು ಮತ್ತು ಸಂಘಟಕರು ಅವರನ್ನು ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಅಮನ್ ದೀಪ್ ಸಿಂಗ್ ಅವರು ಮ್ಯಾರಥಾನ್ ಓಟ ಆರಂಭಿಸುವ ಕೆಲವೇ ಗಂಟೆಗಳ ಮುನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ದೇವರು ನನ್ನ ಜೊತೆ ಇದ್ದಾನೆ" (God is with me) ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದಾರೆ. ಆದರೆ ಓಟದ ಮಧ್ಯದಲ್ಲೇ ಸಂಭವಿಸಿದ ಈ ಸಾವು ಇಡೀ ರನ್ನಿಂಗ್ ಸಮುದಾಯ ಮತ್ತು ಕ್ರೀಡಾ ಪ್ರೇಮಿಗಳಲ್ಲಿ ತೀವ್ರ ಆಘಾತ ಮೂಡಿಸಿದೆ.