ಮೈಸೂರು ಆಗಸ್ಟ್ 15 :ನೈರುತ್ಯ, ಮೈಸೂರು ವಿಭಾಗ ರೈಲ್ವೆಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೈಸೂರು ರೈಲ್ವೆ ಮೈದಾನದಲ್ಲಿ ದೇಶಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಮ್ಮಾಸ್ ಹಮೀದ್, ಶಾಖಾಧಿಕಾರಿಗಳು, ರೈಲ್ವೆ ಸಿಬ್ಬಂದಿ, ಲಲಿತಾ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮಾನ್ಯತೆ ಪಡೆದ ರೈಲ್ವೆ ಸಂಘಟನೆಗಳು ಮತ್ತು ಸಂಘಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶ್ರೀ ಮುದಿತ್ ಮಿತ್ತಲ್ ಅವರು ಮೈಸೂರು ವಿಭಾಗದ ಪ್ರಮುಖ ಸಾಧನೆಗಳನ್ನು ವಿವರಿಸಿ, ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಮರ್ಪಿತ ಸೇವೆಯನ್ನು ಶ್ಲಾಘಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರಕು ಸಾಗಣೆ 9.74% ಹೆಚ್ಚಾಗಿದೆ ಹಾಗೂ ಸರಕು ರೈಲುಗಳ ವೇಗದಲ್ಲಿ 14% ಏರಿಕೆಯಾಗಿದೆ. ಎನ್ಎಂಜಿ ಲೋಡಿಂಗ್‌ನಲ್ಲಿ 43% ಹೆಚ್ಚಳವಾಗಿದ್ದು, ದ್ವಿಚಕ್ರ ವಾಹನಗಳ ಸಾಗಣೆಯಲ್ಲಿ 53% ಏರಿಕೆ ಕಂಡುಬಂದಿದೆ. ಗತಿ ಶಕ್ತಿ ಕಾರ್ಗೋ ಟರ್ಮಿನಲ್ – ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸೈಡಿಂಗ್ ಅನ್ನು ಮೊದಲ ಬಾರಿಗೆ ಬಳಸಲಾಗಿದ್ದು, ಇದುವರೆಗೆ ಎರಡು ರೇಕ್‌ಗಳನ್ನು ಲೋಡ್ ಮಾಡುವ ಮೂಲಕ ಸುಮಾರು ₹65 ಲಕ್ಷ ಆದಾಯ ಗಳಿಸಲಾಗಿದೆ. ಅಲ್ಲದೆ, ಅರಸೀಕೆರೆ–ಯಲಹಂಕ ನಡುವೆ ಹೊಸ ಮೆಮು ರೈಲು ಸೇವೆ ಆರಂಭಿಸಲಾಗಿದೆ..jpeg)
ಹಣಕಾಸು, ಸಿಗ್ನಲಿಂಗ್ ಮತ್ತು ಸುರಕ್ಷತಾ ಕ್ಷೇತ್ರಗಳಲ್ಲಿಯೂ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. 1,200 ಪಿಪಿಎಂ ಗಳನ್ನು 7ನೇ ವೇತನ ಆಯೋಗದನ್ವಯ ನವೀಕರಿಸಲಾಗಿದ್ದು, ಪಿಂಚಣಿ ಪಾವತಿಯನ್ನು ಸುಗಮವಾಗಿ ಮತ್ತು ನಿಖರವಾಗಿ ನಿರ್ವಹಿಸಲು ಇದರಿಂದ ಸಹಾಯವಾಗಲಿದೆ. ವಿಶ್ರಾಂತಿ ಗೃಹಗಳು, ರೈಲ್ವೆ ಮ್ಯೂಸಿಯಂ ಮತ್ತು ರೈಲ್ವೆ ಆಸ್ಪತ್ರೆಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಯುಪಿಐ ಪಾವತಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಂತರಿಕ ಪರಿಶೀಲನೆಗಳ ಮೂಲಕ ಸುಮಾರು ₹7.15 ಕೋಟಿ ಉಳಿತಾಯ ಮಾಡಲಾಗಿದೆ. 15 ಲೆವೆಲ್ ಕ್ರಾಸಿಂಗ್‌ಗಳ ಇಂಟರ್‌ಲಾಕಿಂಗ್ ಗುರಿಯ ಪೈಕಿ ಈಗಾಗಲೇ 9 ಲೆವೆಲ್ ಕ್ರಾಸಿಂಗ್‌ಗಳ ಕೆಲಸ ಪೂರ್ಣಗೊಂಡಿದೆ. ಅರಸೀಕೆರೆ–ಶಿವಮೊಗ್ಗ ವಿಭಾಗದಲ್ಲಿ ಐಬಿಎಸ್ ಅಳವಡಿಸಲಾಗಿದ್ದು, 13 ಲೆವೆಲ್ ಕ್ರಾಸಿಂಗ್‌ಗಳಲ್ಲಿ ಮಿನಿ ಐಪಿಎಸ್ ವ್ಯವಸ್ಥೆ ಒದಗಿಸಲಾಗಿದೆ.
ಯಾಂತ್ರಿಕ, ವೈದ್ಯಕೀಯ ಮತ್ತು ಪರಿಸರ ವಿಭಾಗಗಳೂ ಉತ್ತಮ ಸಾಧನೆ ಮಾಡಿವೆ. ರೈಲು ಸಂಖ್ಯೆ 16215ರ ನಾಲ್ಕು ರೇಕ್‌ಗಳನ್ನು ಐಸಿಎಫ್ ನಿಂದ ಎಲ್ ಹೆಚ್ ಬಿ ಕೋಚ್‌ಗಳಿಗೆ ಪರಿವರ್ತಿಸಲಾಗಿದೆ. ದೋಷಗಳು ಮತ್ತು ಬಿರುಕುಗಳನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಎನ್ಕೋಡಿಂಗ್ ಕ್ಯಾಮರಾಗಳು ಖರೀದಿಸಲಾಗಿದೆ. ಹಾಸನ ರಸ್ತೆ ನಿಲ್ದಾಣದಲ್ಲಿ ಬಿಓಏಕ್ಸ್ಎನ್ ಬಾಗಿಲುಗಳನ್ನು ಸರಿಪಡಿಸುವ ಉಪಕರಣವನ್ನು ಸ್ವಂತವಾಗಿ ಅಭಿವೃದ್ಧಿಪಡಿಸಲಾಗಿದ್ದು, MNGT ಎಂಎನ್ ಜಿಟಿ, ಎಸ್ಎಬಿ ಟೆಸ್ಟ್ ಬೆಂಚ್ ನಿರ್ಮಿಸಲಾಗಿದೆ. ವೈದ್ಯಕೀಯ ವಿಭಾಗವು ನಿಗದಿತ ಅವಧಿಯಲ್ಲಿ 337 ಪಿಎಂಇ ಗಳು ಮತ್ತು 414 ಆರ್ ಎಂಇಗಳನ್ನು ಪೂರ್ಣಗೊಳಿಸಿದೆ. ಹಾಸನ ರೈಲ್ವೆ ನಿಲ್ದಾಣಕ್ಕೆ ಎರಡು ವರ್ಷಗಳ ಅವಧಿಗೆ 'ಈಟ್ ರೈಟ್ ಸ್ಟೇಷನ್' ಪ್ರಮಾಣಪತ್ರ ದೊರೆತಿದೆ. ರೈಲ್ವೆ ಆಸ್ಪತ್ರೆಯ ಮಕ್ಕಳ ವಾರ್ಡ್ ಅನ್ನು ನವೀಕರಿಸಲಾಗಿದ್ದು, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹವಾಮಾನ ಬದಲಾವಣೆ, ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣವನ್ನು ಆಧುನಿಕ ಪ್ರಯಾಣಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದ್ದು, ಇತ್ತೀಚೆಗೆ ಮಾನ್ಯ ಪ್ರಧಾನಮಂತ್ರಿಯವರು ಉದ್ಘಾಟಿಸಿದ್ದಾರೆ. ಮೈಸೂರು ವಿಭಾಗದಲ್ಲಿ ಒಟ್ಟು 15 ನಿಲ್ದಾಣಗಳು ABSS ಯೋಜನೆಯಡಿ ಅಭಿವೃದ್ಧಿಯಾಗುತ್ತಿದ್ದು, ಉಳಿದ ನಿಲ್ದಾಣಗಳ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. ಇಂಜಿನಿಯರಿಂಗ್ ವಿಭಾಗವು ಹಾಸನ–ಮಂಗಳೂರು ವಿಭಾಗದಲ್ಲಿ ಎರಡು ರಸ್ತೆ ಮೇಲ್ಸೇತುವೆ ಗಳು ಮತ್ತು ಚಿಕ್ಕಜಾಜೂರು–ಕರಜ್ ಗಿ ವಿಭಾಗದಲ್ಲಿ ಒಂದು ರಸ್ತೆ ಕೆಳಸೇತುವೆ ನಿರ್ಮಿಸಿದ್ದು, ಇದರಿಂದ ಮೂರು ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲು ಸಾಧ್ಯವಾಗಿದೆ. ಐದು ಹೈ-ಲೆವೆಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ನಾಲ್ಕು ಗ್ಯಾಂಗ್ ವಿಶ್ರಾಂತಿ ಹಾಗೂ ಸಾಮಗ್ರಿ ಕೊಠಡಿ ನಿರ್ಮಿಸಲಾಗಿದ್ದು, 7,410 ಹೊಸ ಮರಗಳನ್ನು ನೆಡಲಾಗಿದೆ.
ವಿದ್ಯುತ್ ಮತ್ತು ಟ್ರಾಕ್ಷನ್ ವಿಭಾಗಗಳು 14 ರೈಲುಗಳನ್ನು ಎಸಿ ಟ್ರಾಕ್ಷನ್ ಗೆ ಒಳಪಡಿಸಿವೆ. ರೈಲಿನ ವೇಗವನ್ನು ಮೇಲ್ವಿಚಾರಣೆ ಮಾಡಲು 'ರೈಲ್ ಸ್ಪಿಯರ್' ಎಂಬ ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಘಾಟ್ ವಿಭಾಗದಲ್ಲಿ ವಂದೇ ಭಾರತ್ ರೈಲುಗಳ ಕಾರ್ಯಾಚರಣೆಗೆ ಅಗತ್ಯವಾದ ಮಾರ್ಗದ ತಯಾರು ಪೂರ್ಣಗೊಳಿಸಲಾಗಿದೆ. ವಾಣಿಜ್ಯ ವಿಭಾಗವು ಎರಡು ವಿಶೇಷ ಪಾರ್ಸೆಲ್ ರೈಲುಗಳನ್ನು ಓಡಿಸಿ ಸುಮಾರು ₹49.81 ಲಕ್ಷ ಆದಾಯ ಗಳಿಸಿದೆ. 16 ಹೊಸ ಏಟಿವಿಎಂಗಳನ್ನು ಅಳವಡಿಸಲಾಗಿದ್ದು, ಏಪ್ರಿಲ್‌ನಲ್ಲಿ ಟಿಕೆಟ್ ತಪಾಸಣೆಯಿಂದ ದಾಖಲೆಯ ₹1.14 ಕೋಟಿ ಆದಾಯ ಗಳಿಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಓಡಿಸಲಾದ ಮೂರು ವಿಶೇಷ ರೈಲುಗಳಿಂದ ಸುಮಾರು ₹1.26 ಕೋಟಿ ಆದಾಯ ಗಳಿಸಲಾಗಿದೆ.
ವಿದ್ಯುತ್ ಸಾಮಾನ್ಯ ವಿಭಾಗವು 374 kW ಮೇಲ್ಛಾವಣಿ ಸೌರ ವಿದ್ಯುತ್ ಸಾಮರ್ಥ್ಯವನ್ನು ಅಳವಡಿಸಿದ್ದು, ಶೀಘ್ರದಲ್ಲೇ ಸುಮಾರು 1,060 kW ಹೆಚ್ಚುವರಿ ಸಾಮರ್ಥ್ಯವನ್ನು ಸೇರಿಸಲು ಯೋಜಿಸಲಾಗಿದೆ. ಆರ್ ಪಿಎಫ್ ತಂಡವು 42 ಮಕ್ಕಳನ್ನು ರಕ್ಷಿಸಿದ್ದು, 114 ಪ್ರಯಾಣಿಕರಿಗೆ ಸೇರಿದ ಸುಮಾರು ₹60 ಲಕ್ಷ ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚಿ ಹಸ್ತಾಂತರಿಸಿದೆ. ಅಲ್ಲದೆ, ಸುಮಾರು 35 ಕೆಜಿ ಗಾಂಜಾವನ್ನು, ಅಂದಾಜು ₹27 ಲಕ್ಷ ಮೌಲ್ಯದ, ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಆರ್ ಪಿಎಫ್ ಸಿಬ್ಬಂದಿ ತೋರಿಸುತ್ತಿರುವ ಧೈರ್ಯ ಮತ್ತು ಸೇವೆಯನ್ನು ಶ್ಲಾಘಿಸಿದರು. ಎಸ್ ಡಬ್ಲ್ಯೂಆರ್ ಎಂಯು, ಎಸ್ ಡಬ್ಲ್ಯೂಆರ್ ಈಎಸ್, ಎಐ ಎಸ್ ಸಿ/ ಎಸ್ ಟಿ ಮತ್ತು ಓಬಿಸಿ ಸಂಘಟನೆಗಳು ನೀಡುತ್ತಿರುವ ರಚನಾತ್ಮಕ ಸಹಕಾರಕ್ಕೂ ಅವರು ಕೃತಜ್ಞತೆ ಸಲ್ಲಿಸಿದರು.
ಸುರಕ್ಷತೆಯೇ ಭಾರತೀಯ ರೈಲ್ವೆಯ ಅತ್ಯಂತ ಪ್ರಮುಖ ಆದ್ಯತೆ ಎಂದು ಒತ್ತಿ ಹೇಳಿದ ಶ್ರೀ ಮುದಿತ್ ಮಿತ್ತಲ್ ಅವರು, ಸುರಕ್ಷತಾ ವಿಭಾಗದ ಪರಿಶೀಲನೆಗಳು, ಸೇಫ್ಟಿ ಮತ್ತು ಅಣಕು ಕಾರ್ಯಾಚರಣೆ ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಶ್ಲಾಘಿಸಿದರು. ಸುರಕ್ಷತೆ ಯಾವುದೇ ಒಂದು ವಿಭಾಗದ ಜವಾಬ್ದಾರಿ ಮಾತ್ರವಲ್ಲ, ಅದು ಪ್ರತಿಯೊಬ್ಬ ರೈಲ್ವೆ ಸಿಬ್ಬಂದಿಯ ಮನೋಭಾವ ಮತ್ತು ಸಾಮೂಹಿಕ ಜವಾಬ್ದಾರಿಯಾಗಬೇಕು ಎಂದು ಅವರು ಹೇಳಿದರು. “ಸುರಕ್ಷತೆ ಮೊದಲು, ಸುರಕ್ಷತೆ ಮೊದಲು, ಸುರಕ್ಷತೆ ಮೊದಲು – ಇದೇ ನಮ್ಮ ಧ್ಯೇಯವಾಗಬೇಕು” ಎಂದು ಕರೆ ನೀಡಿದರು. ಕಾಮಗಾರಿ ಸ್ಥಳಗಳಲ್ಲಿ ಹೆಲ್ಮೆಟ್, ಸುರಕ್ಷತಾ ಜಾಕೆಟ್ ಮತ್ತು ಸುರಕ್ಷತಾ ಪಾದರಕ್ಷೆ ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಬಳಸುವಂತೆ ಸಿಬ್ಬಂದಿಗೆ ಅವರು ಸೂಚಿಸಿದರು.

