Mumbai Fire ವಿಲೇ ಪಾರ್ಲೆಯ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಅಗ್ನಿ ಅವಘಡ: ಮಗು ಸೇರಿ ಇಬ್ಬರು ಮೃತ್ಯು, ಹಲವರಿಗೆ ಗಾಯ..!
ಸುದ್ದಿವಾಣಿ
8/12/2026 10:04:00 AM
ಮುಂಬೈ, ಆಗಸ್ಟ್ 12 : ಮುಂಬೈಯ ಪಶ್ಚಿಮ ಉಪನಗರವಾದ ವಿಲೇ ಪಾರ್ಲೆಯಲ್ಲಿರುವ ವಸತಿ ಕಟ್ಟಡದ 11ನೇ ಮಹಡಿಯಲ್ಲಿ ಮಂಗಳವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಯುವತಿ ಮತ್ತು ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ. ಘಟನೆಯಲ್ಲಿ ಒಟ್ಟು ಆರು ಜನರು ಗಾಯಗೊಂಡಿದ್ದಾರೆ. ಮುಂಬೈ ವಿಲೇ ಪಾರ್ಲೆ ಬ್ಯಾಪ್ಟಿಸ್ಟಾ ರಸ್ತೆಯಲ್ಲಿರುವ 12 ಅಂತಸ್ತಿನ ಕಟ್ಟಡ ಶಾಂತ ಭವನದಲ್ಲಿ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. 11 ನೇ ಮಹಡಿಯಲ್ಲಿರುವ ಎರಡು ಫ್ಲಾಟ್‌ಗಳಲ್ಲಿ ಈ ಘಟನೆ ನಡೆದಿದೆ. ಮುಂಬೈ ಅಗ್ನಿಶಾಮಕ ದಳ ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 11ರ ಮಂಗಳವಾರ ರಾತ್ರಿ 10:02 ರ ಸುಮಾರಿಗೆ ಬೆಂಕಿಯ ಬಗ್ಗೆ ಮೊದಲ ಎಚ್ಚರಿಕೆ ಕರೆ ಬಂದಿತು. ಮಾಹಿತಿ ಪಡೆದ ತಕ್ಷಣ, ಮುಂಬೈ ಅಗ್ನಿಶಾಮಕ ದಳ ಮತ್ತು ಮುಂಬೈ ಪೊಲೀಸರು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ಕೈಗೊಂಡರು. 11ನೇ ಮಹಡಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಮೂರು ಗಂಟೆಗಳ ಸತತ ಪ್ರಯತ್ನದ ನಂತರ ಅಗ್ನಿಶಾಮಕ ದಳದವರು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಿನ ಜಾವ 1:00 ಗಂಟೆಯ ಸುಮಾರಿಗೆ, ಅಗ್ನಿಶಾಮಕ ದಳದವರು ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದರು. ಈ ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, 11 ನೇ ಮಹಡಿಯಲ್ಲಿನ ವಿದ್ಯುತ್ ವೈರಿಂಗ್, ಎಸಿ ಘಟಕಗಳಲ್ಲಿ ಈ ಬೆಂಕಿ ಕಾಣಿಸಿಕೊಂಡಿತ್ತು. ಇದು ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಗಿರಬಹುದು ಎಂದು ಪ್ರಾಥಮಿಕ ತನಿಖೆಗಳು ತಿಳಿಸುತ್ತಿವೆ ಎಂದು ಅಗ್ನಿಶಾಮಕ ದಳ ಹೇಳಿದೆ. ಘಟನೆಯಲ್ಲಿ ಗಾಯಗೊಂಡ ಆರು ಮಂದಿಯನ್ನು ತಕ್ಷಣವೇ ಹತ್ತಿರದ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಬೀರ್ ಮತ್ತು ಅಂಕಿತಾ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮೊದಲೇ ಸಾವನ್ನಪ್ಪಿದ್ದಾರೆ . ನಾನಾವತಿ ಆಸ್ಪತ್ರೆಗೆ ಬರುವಷ್ಟರಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇನ್ನು ಘಟನೆಯಲ್ಲಿ ಗಾಯಗೊಂಡ ಇತರ ನಾಲ್ವರು ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಟ್ಯಾಗ್ಗಳು:
ದೇಶ