ಮುಲ್ಕಿ, ಆಗಸ್ಟ್ 20 : ಮಂಗಳೂರು ಹೊರವಲಯದ ಮುಲ್ಕಿ ಬೆಳ್ಳಾಯರು ಕೋಲ್ನಾಡು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಮಂಗಳವಾರ ಮಧ್ಯರಾತ್ರಿ ಯುವಕನೊಬ್ಬ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾ ಹಾಗೂ ಸ್ಥಳೀಯರ ಸಮಯಪ್ರಜ್ಞೆಯಿಂದ ಆರೋಪಿ ಕಳ್ಳ ಮುಲ್ಕಿ ಪೊಲೀಸರ ಅತಿಥಿಯಾಗಿದ್ದಾನೆ.
ಮಡಿಕೇರಿಯ ವಿರಾಜಪೇಟೆ ನಿವಾಸಿ ರವಿ (28) ಬಂಧಿತ ಆರೋಪಿ. ಆರೋಪಿ ರವಿ ಮಂಗಳವಾರ ರಾತ್ರಿ 11:30ರ ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ ಹಗ್ಗದ ಸಹಾಯದಿಂದ ಮೇಲೆ ಹತ್ತಿ, ಬಳಿಕ ಮೇಲ್ಭಾಗದ ಕಬ್ಬಿಣದ ಜಾಲಿಯನ್ನು ತುಂಡರಿಸಿ ದೇವಸ್ಥಾನದ ಒಳಗೆ ಪ್ರವೇಶಿಸಿದ್ದಾನೆ. ಒಳಗೆ ತೆರಳಿದಾತ ಕಾಣಿಕೆ ಡಬ್ಬಿಯನ್ನು ಜಾಲಾಡಿ, ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾಗೆ ಹಾನಿ ಮಾಡಲು ಯತ್ನಿಸಿದ್ದಾನೆ.
ಸಿಸಿಟಿವಿಯಿಂದ ಸಿಕ್ಕಿಬಿದ್ದ ಕಳ್ಳ:
ಕುಂದಾಪುರ ಮೂಲದ 'ಸೈನ್ ಇನ್ ಸೆಕ್ಯೂರಿಟಿ' ಕಂಪನಿಯವರು ದೇವಸ್ಥಾನದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಿದ್ದರಿಂದ ಈ ಕೃತ್ಯದ ಮುನ್ಸೂಚನೆ ಪಡೆದು ತಕ್ಷಣವೇ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮುಲ್ಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತ ಸ್ಥಳೀಯರು ಹಾಗೂ ಮುಲ್ಕಿ ಪೊಲೀಸ್ ಠಾಣೆಯ ಎಸ್‌ಐ ರಾಘವೇಂದ್ರ ನಾಯಕ್ ಮತ್ತು ಸಿಬ್ಬಂದಿ ದೇವಸ್ಥಾನಕ್ಕೆ ಧಾವಿಸಿ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರನ್ನು ಕಂಡು ಪರಾರಿಯಾಗಲು ಯತ್ನಿಸಿದ ಆರೋಪಿ ರವಿ, ದೇವಸ್ಥಾನದ ಒಳಭಾಗದಲ್ಲಿದ್ದ ಸುಬ್ರಹ್ಮಣ್ಯ ಗುಡಿಯೊಳಗೆ ಅಡಗಿ ಕುಳಿತಿದ್ದನು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ವೇಳೆ, ಈ ಆರೋಪಿ ರವಿ ಈ ಹಿಂದೆ ಗಂಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಸೆರೆಮನೆವಾಸ ಅನುಭವಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ರಾತ್ರಿ 10 ಗಂಟೆಗೆ ದೇವಸ್ಥಾನಕ್ಕೆ ಬಂದು ಆತ ಸ್ಥಳವನ್ನು ಪರಿಶೀಲಿಸಿ ಹೋಗಿದ್ದ ಎಂಬ ಅಂಶವೂ ತಿಳಿದುಬಂದಿದೆ. ಮುಲ್ಕಿ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ. ದೇವಸ್ಥಾನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿರುವುದರಿಂದ ದೊಡ್ಡ ಪ್ರಮಾಣದ ಕಳ್ಳತನಗಳು ತಪ್ಪಿದಂತಾಗಿದೆ ಎಂದು ಸಾರ್ವಜನಿಕರು ನಿರಾಳರಾಗಿದ್ದಾರೆ.